Anti-divorce lawyer divorced: ಉಚಿತವಾಗಿ 1 ರೂ. ಕೂಡಾ ಪಡೆಯದೆ 135 ಕ್ಕೂ ಅಧಿಕ ವಿಚ್ಛೇದನಗಳನ್ನು ತಡೆದಿದ್ದ ವಕೀಲರಿಗೆ ಡಿವೋರ್ಸ್ ನೀಡಿದ ಪತ್ನಿ !

ಉಚಿತವಾಗಿ 1 ರೂ. ಕೂಡಾ ಪಡೆಯದೆ 135 ಕ್ಕೂ ಅಧಿಕ ವಿಚ್ಛೇದನಗಳನ್ನು ತಡೆದಿದ್ದ ವಕೀಲರಿಗೆ ಡಿವೋರ್ಸ್ ನೀಡಿದ ಪತ್ನಿ

‘ಒಳಿತು ಮಾಡು ಮನುಜ’ ಅಂತಾರೆ. ಒಂದು ವೇಳೆ
ಒಳ್ಳೆಯದು ಮಾಡಲು ಹೋದರೆ ಹೆಚ್ಚಿನ ಸಂದರ್ಭಗಳಲ್ಲಿ ಏನಾಗತ್ತೆ ಅನ್ನೋದಕ್ಕೆ ಈ ಒಂದು ಘಟನೆ ಸಾಕ್ಷಿಯಾದ ಹಾಗಿದೆ. ಬೇರೆಯವರಿಗೆ ಏನಾಗಬಾರದು ಅಂತ ನಾವು ಬಯಸುತ್ತೇವೋ ಅದೇ ವಿಷ್ಯ ನಮ್ಮ ಬಾಳಲ್ಲಿ ಕೆಲವೊಂದು ಬಾರಿ ನಡೆದುಹೋಗುತ್ತದೆ. ಇಂತದ್ದೇ ಒಂದು ಘಟನೆ ಗುಜರಾತ್ ನಲ್ಲಿ ನಡೆದಿದೆ.

ಅವರಿಬ್ಬರೂ ಹಿರಿಯ ವಕೀಲರು. ಕಳೆದ 16 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿರುವ ಅವರು ತಮ್ಮ ವೃತ್ತಿಜೀವನದಲ್ಲಿ 130 ಕ್ಕೂ ಅಧಿಕ ವಿಚ್ಛೇದನ ಪ್ರಕರಣಗಳನ್ನು ತಡೆದಿದ್ದಾರೆ. ಆ ಮೂಲಕ ಕುಟುಂಬ ವ್ಯವಸ್ಥೆಯನ್ನು ಒಟ್ಟು ಗೂಡಿಸಿ ಅದೆಷ್ಟೋ ಮಕ್ಕಳು ಆಯಾ ಮನೆಯಲ್ಲಿ ತಮ್ಮ ಪೋಷಕರ ಜೊತೆ ನೆಮ್ಮದಿಯಾಗಿ ಬದುಕುವಂತೆ ಮಾಡಿದ್ದಾರೆ. ತಮ್ಮಬಳಿ ವಿಚ್ಛೇದನ ಕೋರಿ ಬರುವ ದಂಪತಿಗಳನ್ನು ಕೂರಿಸಿ ಕೌನ್ಸೆಲಿಂಗ್ ಮಾಡಿ ಬೇರೆಯಾಗದಂತೆ ಮನವರಿಕೆ ಮಾಡಿಸಿ ಅದರಿಂದ ಕುಟುಂಬಕ್ಕೆ ಮತ್ತು ನಮ್ಮನ್ನು ನಂಬಿ ಹುಟ್ಟಿಕೊಂಡು ಬಂದ ಮಕ್ಕಳಿಗೆ ಆಗುವ ತೊಂದರೆಗಳನ್ನು ವಿವರಿಸಿ ನ್ಯಾಯಾಲಯದ ಬದಲು ಮನೆಗೆ ಕಳುಹಿಸುತ್ತಿದ್ದರು. ಆದರೆ ಅವರ ದುರಾದೃಷ್ಟಕ್ಕೆ ಕೊನೆಗೆ ಇವರ ಪತ್ನಿಯೇ ವಿಚ್ಛೇದನ ನೀಡಿದ್ದಾರೆ.

ಸದರಿ ವಕೀಲರು ಗುಜರಾತ್ ನ ಅಹಮದಾಬಾದ್ ಹೈಕೋರ್ಟ್‌ನಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ 16 ವರ್ಷಗಳ ವೃತ್ತಿಜೀವನದಲ್ಲಿ ಅನೇಕ ಪ್ರಕರಣಗಳನ್ನು ವಾದಿಸಿ ನ್ಯಾಯ ಕೊಡಿಸಿದವರು. ತಮ್ಮ ಈ ಅವಧಿಯಲ್ಲಿ ಅವರ ಬಳಿ ಬಂದ 138 ಜೋಡಿಗಳು ವಿಚ್ಛೇದನ ಪಡೆಯದಂತೆ ತಡೆದಿದ್ದಾರೆ. ದುಡುಕಿ ಬೇರೆಯಾಗಲು ಹೊರಟ ಆ ಜೋಡಿಗಳನ್ನು ಮತ್ತೆ ಒಂದು ಮಾಡಿದ್ದಾರೆ. ಅವರೆಲ್ಲ ಈಗ ನೆಮ್ಮದಿಯಿಂದ ಬದುಕುತ್ತಿದ್ದಾರೆ.

ಆದರೆ ದುರಂತೆಂದರೆ, ಅದೇ ವಿಚ್ಛೇದನ ವಿರೋಧಿ ವಕೀಲರ ಪತ್ನಿಯೇ ಆತನಿಗೆ ವಿಚ್ಛೇದನ ನೀಡಿದ್ದಾರೆ. ಆ ವಕೀಲರ ಬಳಿ ವಿಚ್ಛೇದನ ಕೇಳಿ ಬಂದವರನ್ನು ವಿಚ್ಛೇದನಕ್ಕೆ ಬಿಡದ ಕಾರಣ ಅವರ ಬಿಸಿನೆಸ್ ಕಮ್ಮಿಯಾದವು. ಅವರಿಗೆ ಬರೋ ಒಟ್ಟು ಪ್ರಕರಣಗಳು ಕಡಿಮೆಯಾದವು. ಒಂದೊಮ್ಮೆ ಡೈವೋರ್ಸ್ ಕೇಳಿ ಬಂದರೂ, ಬಂದವರಿಗೆ ಕೌನ್ಸೆಲಿಂಗ್ ನೀಡಿ ಯಾವುದೇ ಶುಲ್ಕ ವಸೂಲಿ ಮಾಡದ ಕಾರಣ ಅವರಿಗೆ ಆರ್ಥಿಕ ಸಂಕಷ್ಟ ಶುರುವಾಗಿದೆ. ಇದರ ಪರಿಣಾಮ ಕುಟುಂಬದಲ್ಲಿ ಜಗಳ ಆರಂಭವಾಗಿದೆ. ಕೊನೆಗೆ ಬೇಸತ್ತ ವಕೀಲರ ಪತ್ನಿ ಪತಿಯಿಂದ ವಿಚ್ಛೇದನ ಪಡೆಯಲು ಬೇರೊಬ್ಬ ವಕೀಲರ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ವಕೀಲರ ಮಗಳಿಗೆ ಅಪ್ಪನೇ ರೋಲ್ ಮಾಡೆಲ್ !

ಈ ಮಧ್ಯೆ ಸಂತೋಷದ ಸುದ್ದಿಯೊಂದಿದೆ. ಅದೇನೆಂದರೆ ಈ ವಕೀಲರಿಗೆ ಒಬ್ಬ ಮಗಳಿದ್ದಾಳೆ. ಮನೆಯಲ್ಲಿ ಜಗಳದ ಕಾರಣ ಈಗ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆಕೆಯೂ ಕಾನೂನು ವಿದ್ಯಾರ್ಥಿನಿ. ಸದ್ಯಕ್ಕೆ ವಕೀಲರ ಮಗಳು ತನ್ನ ತಾಯಿಯೊಂದಿಗೆ ಇದ್ದರೂ, ವಿಚ್ಛೇದನದ ನಂತರ ತಂದೆಯೊಂದಿಗೆ ಇರುವುದಾಗಿ ಹೇಳಿದ್ದಾಳೆ. ತಂದೆಯೇ ತನ್ನ ರೋಲ್ ಮಾಡೆಲ್ ಎಂದು ಹೇಳಿದ್ದು ಆಕೆಯ ಇಚ್ಛೆಯಂತೆ ನ್ಯಾಯಾಲಯವೂ ಆಕೆಗೆ ತಂದೆಯೊಂದಿಗೆ ಇರಲು ಅನುಮತಿ ನೀಡಿದೆ. ಆದರೆ ಈ ಪ್ರಕರಣದಲ್ಲಿ ವಿಚ್ಛೇದಿತ ಪತ್ನಿ ತನ್ನ ಪತಿಯಿಂದ ಯಾವುದೇ ಜೀವನಾಂಶ ಕೇಳಿಲ್ಲ ಎಂಬುದು ಗಮನಾರ್ಹ.

ಈ ವಿಚ್ಚೇದನ ವಿರೋಧಿ ವಕೀಲರು ತಮ್ಮ ಕಕ್ಷಿದಾರರಿಗೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಅದಕ್ಕೂ ಒಂದು ಕಾರಣವಿದೆ. ಹಿಂದೆ ಅವರ ಹತ್ತಿರದ ಸಂಬಂಧಿಯೊಬ್ಬರು ಈ ಹಿಂದೆ ವಿಚ್ಛೇದನ ಪಡೆದಿದ್ದರು. ಅಂದಿನಿಂದ ಯಾವುದೇ ದಂಪತಿಗಳು ತನ್ನ ಬಳಿ ಬಂದು ವಿಚ್ಛೇದನ ಕೇಳಿದರೂ ಒಂದು ರೂಪಾಯಿ ಕೂಡ ಪಡೆಯದೇ ಅವರಿಗೆ ಕೌನ್ಸೆಲಿಂಗ್ ಮಾಡುತ್ತಿದ್ದರು. ಇದಲ್ಲದೆ, ಪತಿ ಪತ್ನಿಯರು ಜತೆಗೆ ಬಾಳುವಂತೆ ಉತ್ತೇಜಿಸಲು ವಿಚ್ಛೇದನದ ವಿರುದ್ಧ ಅಭಿಯಾನವನ್ನು ಸಹ ರೂಪಿಸಿದ್ದರು. 16 ವರ್ಷಗಳ ವೃತ್ತಿ ಜೀವನದಲ್ಲಿ 138 ಜೋಡಿಗಳ ಮನವೊಲಿಸಿ ವಿಚ್ಛೇದನ ಪಡೆಯದಂತೆ ಮನವೊಲಿಸಿದವರಿಗೆ, ತಮ್ಮ ಪತ್ನಿಯನ್ನು ಒಪ್ಪಿಸಲು ಸಾಧ್ಯವಾಗಿಲ್ಲ ಎನ್ನುವುದೇ ದುರಂತ.

Leave A Reply

Your email address will not be published.