Bangalore: ಮೂರನೇ ವಾರಕ್ಕೆ ಕಾಲಿಟ್ಟ ಶಕ್ತಿ ಯೋಜನೆ : ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಕೊಂಚ ಇಳಿಮುಖ!

As a part of Shakti Yojana there is a decrease in the female passengers in the government bus

ಬೆಂಗಳೂರು: ಜೂನ್ 11ರಂದು ರಾಜ್ಯ ಸರ್ಕಾರ ಮಹತ್ವದ ಯೋಜನೆಯಾದ ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳಾಮಣಿಗಳಿಗೆ ಉಚಿತ ಪ್ರಯಾಣ ಎಂದ ಮೇಲೆ ರಾಜ್ಯದೆಲ್ಲೆಡೆಯು ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳಿಗೆ ಮಹಿಳೆಯರ ದಂಡೇ ಹರಿದುಬರುತ್ತಿತ್ತು. ಎತ್ತ ನೋಡಿದರೂ ಸರಕಾರಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿತ್ತು.

ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಕಲ್ಪಿಸಿದ ಶಕ್ತಿ ಯೋಜನೆ ಜಾರಿಯಾಗುವ ಮೊದಲು ನಿತ್ಯ ಸರಾಸರಿ 84.14 ಲಕ್ಷ ಜನರು ಬಸ್‌ನಲ್ಲಿ ಸಂಚಾರ ಮಾಡುತ್ತಿದ್ದರು. ಶಕ್ತಿ ಯೋಜನೆ ಜಾರಿಯಾದ ಕೇವಲ ಐದು ದಿನಗಳಲ್ಲೇ ಸರಾಸರಿ 1.12 ಕೋಟಿ ಪ್ರಯಾಣಿಕರು ನಿತ್ಯವೂ ಸಂಚರಿಸಿದ್ದಾರೆ.

ಶಕ್ತಿ ಯೋಜನೆ ಶುರುವಾದ ಬಳಿಕ ಕಾಲಿಗೆ ಚಕ್ರ ಕಟ್ಟಿದಂತೆ ಮನೆ ಬಿಟ್ಟು ಟೂರ್ ಹೊಡೆಯುತ್ತಿದ್ದ ಮಹಿಳಾಮಣಿಗಳ ಸಂಖ್ಯೆ ಕೊಂಚ ಇಳಿಮುಖವಾಗಿದ್ದು, ಮನೆಯವರ ಬೈಗುಳ ಇದಕ್ಕೆ ಕಾರಣವೇನೋ ಎಂಬ ಸಣ್ಣ ಅನುಮಾನ ಕಾಡುತ್ತಿದೆ. ಹೆಣ್ಣುಮಕ್ಕಳಿಗೆ ಉಚಿತ ಪ್ರಯಾಣ ಆರಂಭವಾದ ಮೇಲೆ ಅವರ ಜತೆ ಹೋಗುವ ಪುರುಷರು ಕೂಡ ವಿಧಿಯಿಲ್ಲದೆ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿದ ಪರಿಣಾಮ ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸುವ ಪುರುಷರ ಸಂಖ್ಯೆ ಕೂಡ ಕೊಂಚ ಹೆಚ್ಚಳವಾಗಿದೆ.

ಹೊರನಾಡು, ಹಂಪಿ, ಮೈಸೂರು, ಬೇಲೂರು, ಹಾಸನ, ಉಡುಪಿ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಮಹಿಳೆಯರ ದಂಡು ಸಾಗರೋಪಾತಿಯಲ್ಲಿ ಕಂಡುಬಂದು ರಾಜ್ಯದ ಬಹುತೇಕ ಕಡೆಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವ ದೃಶ್ಯ ಇತ್ತೀಚಿಗೆ ಸಾಮಾನ್ಯವಾಗಿ ಬಿಟ್ಟಿದೆ. ಮತ್ತೊಂದೆಡೆ ಬಾಗಲಕೋಟೆ, ಗದಗ, ಕಲಬುರ್ಗಿ, ಚಿತ್ರದುರ್ಗ ಸೇರಿ ಕೆಲವೆಡೆ ಬಸ್ಸಿನ ಆಸನಗಳು ತುಂಬಿ ಬಸ್ಸಿನ ಬಾಗಿಲ ಬಳಿ ಜೋತುಬಿದ್ದು, ಬಾಗಿಲುಗಳನ್ನು ಮುರಿದ ಪ್ರಹಸನ ಕೂಡ ಕೆಲವೆಡೆ ನಡೆದಿದೆ.

ಈ ನಡುವೆ ಶಕ್ತಿ ಯೋಜನೆ ಮೂರನೇ ವಾರಕ್ಕೆ ತಲುಪಿದ್ದು, ಈ ಹಿಂದೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದ ಮಹಿಳೆಯರ ಸಂಖ್ಯೆ ಕೊಂಚ ಇಳಿಕೆಯಾಗುತ್ತಿದೆ ಎನ್ನಲಾಗುತ್ತಿದೆ. ಮನೆಯಲ್ಲಿ ಬೈಗುಳದ ಪಾಠ ಶುರುವಾಗಿದ್ದು, ಮನೆಯಿಂದ ಹೊರ ಬರಲು ಮನೆಯವರು ಅನುಮತಿ ನೀಡದೆ ಇರುವುದು ಕೂಡ ಇದಕ್ಕೆ ಕಾರಣ ಎನ್ನಲಾಗಿದೆ.

Leave A Reply

Your email address will not be published.