Sulya: ಪ್ರವೀಣ್ ನೆಟ್ಟಾರು ಹತ್ಯೆಗೆ ಒಂದು ವರ್ಷ!

Latest news Sulya news It has been a year since Praveen Nettaru was killed

ಸುಳ್ಯ: ಬಿಜೆಪಿಯ ಯುವ ಮುಖಂಡ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು (30) ಹತ್ಯೆಯಾಗಿ ಜುಲೈ 26ಕ್ಕೆ ಒಂದು ವರ್ಷವಾಯಿತು. ಈ ಘಟನೆ ಇನ್ನೂ ಜನರ ಮನಸ್ಸಿನಲ್ಲಿ ಮಾಸದೇ ಹಾಗೆಯೇ ಉಳಿದಿದೆ. ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇನ್ನೂ ಕೂಡಾ ಆರೋಪಿಗಳು ತಲೆಮರೆಸಿಕೊಂಡಿರುವುದು ಅವರ ಬಂಧನ ಬಾಕಿಯಾಗಿಯೇ ಇದೆ. ಪ್ರವೀಣ್‌ ನೆಟ್ಟಾರು ಅವರು ಅಕ್ಷಯ ಫ್ರೆಶ್‌ ಚಿಕನ್‌ ಫಾರ್ಮ್‌ ವೊಂದನ್ನು ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ನಡೆಸುತ್ತಿದ್ದರು. ಆದರೆ ಜುಲೈ 26, 2022 ರಂದು ರಾತ್ರಿ ಸರಿ ಸುಮಾರು 8.30 ಕ್ಕೆ ಎಂದಿನಂತೆ ತನ್ನ ವ್ಯಾಪಾರ ಮುಗಿಸಿದ ಪ್ರವೀಣ್‌ ನೆಟ್ಟಾರು ಅವರು ಅಂಗಡಿ ಬಾಗಿಲು ಹಾಕಿ ಸ್ಕೂಟರ್‌ನಲ್ಲಿ ಕುಳಿತು ಮನೆಗೆ ಹೊರಡಲು ಸಿದ್ಧರಾದಾಗ, ದುಷ್ಕರ್ಮಿಗಳು ತಮ್ಮಲ್ಲಿದ್ದ ಮಾರಕಾಸ್ತ್ರಗಳ ಮೂಲಕ ಹತ್ಯೆ ಮಾಡೇ ಬಿಟ್ಟಿದ್ದರು.

ಹಿಂದೂ ಕಾರ್ಯಕರ್ತನ ಹತ್ಯೆನ ಮರುದಿನ ದೇಶವ್ಯಾಪಿ ಸಂಚಲನ ಮೂಡಿಸಿತು. ಪ್ರವೀಣ್‌ ಮೃತ ಶರೀರದ ಮೆರವಣಿಗೆ ಪುತ್ತೂರಿನಿಂದ ಬೆಳ್ಳಾರೆಗೆ ಸಾಗಿ ಬಂದು, ಜನ ಸಾಗರೋಪಾದಿಯಲ್ಲಿ ಬಂದು ದರ್ಶನ ಪಡೆದರು. ಅಷ್ಟು ಮಾತ್ರವಲ್ಲದೇ, ಓರ್ವ ಹಿಂದೂ ಕಾರ್ಯಕರ್ತನ ಸಾವಿಗೆ ಕೂಡಲೇ ಸ್ಪಂದಿಸದ, ಬೆಳ್ಳಾರೆಗೆ ಆಗಮಿಸಿದ್ದ ಜನಪ್ರತಿನಿಧಿಗಳಿಗೆ ಜನ ದಿಗ್ಭಂಧನ ವಿಧಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಕಾರನ್ನು ಅಲುಗಾಡಿಸಿ ಕಾರಿನ ಚಕ್ರ ಪಂಕ್ಚರ್‌ ಮಾಡಿ, ಪಲ್ಟಿ ಮಾಡಲು ಪ್ರಯತ್ನ ಮಾಡಲಾಗಿತ್ತು.

ಬಳಿಕ ಪ್ರವೀಣ್‌ ಮನೆಗೆ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು ಬಂದು ಮನೆಯವರಿಗೆ ಸಾಂತ್ವನ ಹೇಳಿ ಆರೋಪಿಗಳ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದರು ಅನಂತರ ಪರಿಸ್ಥಿತಿ ಸ್ವಲ್ಪ ತಿಳಿಗೊಂಡಿತು.

ನಂತರದ ಬೆಳಗವಣಿಗೆಯಲ್ಲಿ ಪೊಲೀಸರು ಬೆಳ್ಳಾರೆಯ ಶಫೀಕ್‌(27), ಸವಣೂರಿನ ಝಾಕೀರ್‌, ಶಿಹಾಬುದ್ದೀನ್‌ ಸುಳ್ಯ(31), ಬಶೀರ್‌ ಎಲಿಲೆ(29), ರಿಯಾಸ್‌ ಅಂಕತ್ತಡ್ಕ ಸೇರಿ ಹತ್ತು ಮಂದಿಯನ್ನು ಬಂಧಿಸಿದ್ದರು.

ರಾಜ್ಯ ಸರಕಾರ ಈ ಪ್ರಕರಣವನ್ನು ಎನ್‌ಐಎಗೆ ವಹಿಸಿತ್ತು. ರಾಷ್ಟ್ರೀಯ ತನಿಖಾ ದಳ ಈ ಪ್ರಕರಣವನ್ನು ಕೈಗೆತ್ತಿಗೊಂಡು, ಪಿಎಫ್‌ಐ ದ್ವೇಷದ ಹತ್ಯೆಗಳಲ್ಲಿ ತೊಡಗಿದೆ ಎಂದು ದಾಖಲು ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಲ್ಲಿಯವರೆಗೆ ಸುಮಾರು 21 ಮಂದಿಯ ವಿರುದ್ಧ ಎನ್‌ಐಎ ಆರೋಪ ಪಟ್ಟಿ ಸಲ್ಲಿಸಿದೆ.

ಪ್ರವೀಣ್‌ ಹತ್ಯೆ ಬಳಿಕ ಪಿಎಫ್ಐ ನಿಷೇಧಕ್ಕೆ ಹೆಚ್ಚಿನ ಆಗ್ರಹ ಕೇಳಿಬಂದಿತ್ತು. ಪಿಎಫ್ಐ ಹಾಗೂ ಅದರ ಅಂಗ ಸಂಸ್ಥೆಗಳನ್ನು ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಿ, 5 ವರ್ಷಗಳ ಅವಧಿಗೆ ನಿಷೇಧಿಸಿ 2022ರ ಸೆಪ್ಟೆಂಬರ್‌ 28ರಂದು ಕೇಂದ್ರ ಸರಕಾರ ಆದೇಶಿಸಿತ್ತು. ಪ್ರವೀಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳು ತಲೆಮರೆಸಿ ಕೊಂಡಿದ್ದಾರೆ ಎಂದು ಎನ್‌ಐಎ ತಿಳಿಸಿದೆ. ಕೊಡಗಿನ ಅಬ್ದುಲ್‌ ನಾಸಿರ್‌, ಅಬ್ದುಲ್‌ ರೆಹಮಾನ್‌ ಮತ್ತು ಬೆಳ್ತಂಗಡಿಯ ನೌಷದ್‌ ಹಾಗೂ ಐವರು ಸೇರಿದಂತೆ 8 ಮಂದಿ ತಲೆಮರೆಸಿಕೊಂಡಿದ್ದಾರೆ. ತುಫೈಲ್‌, ಮೊಹಮ್ಮದ್‌ ಮುಸ್ತಾಫ‌ ಸುಳಿವಿಗೆ ತಲಾ 5 ಲಕ್ಷ ರೂ. ಉಮರ್‌ ಫಾರೂಕ್‌, ಅಬೂಬಕ್ಕರ್‌ ಸಿದ್ದಿಕ್‌ ಸುಳಿವಿಗೆ ತಲಾ 2 ಲಕ್ಷ ಬಹುಮಾನ ಘೋಷಿಸಲಾಗಿದೆ.

ನ್ಯಾಯಾಲಯದ ಸೂಚನೆ ಮೇರೆಗೆ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದೆ. ಆ.18ರ ಮೊದಲು ಶರಣಾಗದಿದ್ದರೆ ಆಸ್ತಿ ಜಪ್ತಿ ಕೂಡಾ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ. ಮೊದಲ ಬಾರಿ ಗಡುವು ನೀಡಿದ್ದಕ್ಕೆ ಯಾವುದೇ ಸ್ಪಂದನೆ ದೊರಕದೇ ಇರುವುದರಿಂದ ಇದೀಗ ಎರಡನೇ ಬಾರಿ ಗಡುವು ವಿಧಿಸಿದ್ದು, ಆರೋಪಿಗಳ ಮನೆಗೆ ಆದೇಶ ಪ್ರತಿ ಅಂಟಿಸಲಾಗಿದೆ.

ಪ್ರವೀಣ್‌ ನೆಟ್ಟಾರು ಹತ್ಯೆಯ ನಂತರ, ಪ್ರವೀಣ್‌ ಅವರ ಕುಟುಂಬಕ್ಕೆ ಸಹಾಯವಾಗಿ ಮನೆಯೊಂದನ್ನು ಬಿಜೆಪಿ ವತಿಯಿಂದ ನಿರ್ಮಿಸಲಾಗಿತ್ತು. ಜೊತೆಗೆ ಪ್ರವೀಣ್‌ ನೆಟ್ಟಾರು ಪತ್ನಿ ಸರಕಾರಿ ಕಚೇರಿಯಲ್ಲಿ ಉದ್ಯೋಗ ಕೂಡಾ ನೀಡಲಾಗಿತ್ತು.

Leave A Reply

Your email address will not be published.