ಸಾಕುನಾಯಿಗಳಿಗೆ ವಿಷ ಇಕ್ಕಿದ್ರಾ ದುಷ್ಕರ್ಮಿಗಳು? 10 ಕ್ಕೂ ಮಿಕ್ಕಿ ಸಾಕು ನಾಯಿಗಳ ಮಾರಣ ಹೋಮ !

Puttur: ದಿನಂಪ್ರತಿ ಅದೆಷ್ಟೋ ಕ್ರಿಮಿನಲ್ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಈ ನಡುವೆ ಏನು ಅರಿಯದ ಮುಗ್ಧ ಜೀವಿಗಳ ಮೇಲೆ ಹಲ್ಲೆ ಮಾಡುವ ಇಲ್ಲವೇ ಅವುಗಳ ಮೇಲೆ ವಿಕೃತಿ ಮೆರೆಯುವ ಪ್ರಕರಣಗಳು ವರದಿಯಾಗುತ್ತಿವೆ. ಈ ನಡುವೆ ದಕ್ಷಿಣ ಕನ್ನಡ(Dakshina Kannada) ಪುತ್ತೂರಿನ (Puttur) ಹೊರವಲಯದ ಬನ್ನೂರು ಗ್ರಾಮದ ಅಡೆಂಚಿನಡ್ಕ – ಕುಂಟ್ಯಾನ ಹಾಗೂ ಸದಾಶಿವ ಕಾಲೋನಿಯ ಸಮೀಪದಲ್ಲಿ 10ಕ್ಕಿಂತಲೂ ಹೆಚ್ಚು ನಾಯಿ ಮರಿಗಳನ್ನು ಕಿಡಿಗೇಡಿಗಳು ಅಮಾನುಷವಾಗಿ ಹತ್ಯೆ ಮಾಡಿ ರಸ್ತೆ ಬದಿಯಲ್ಲಿ ಎಸೆದು ಹೋಗಿರುವ ದಾರುಣ ಘಟನೆ ವರದಿಯಾಗಿದೆ.

ಪ್ರಾಣಿ ಪ್ರಿಯರಿಗೆ ಶ್ವಾನಗಳು (Dogs)ಎಂದರೆ ಕೇವಲ ಒಂದು ಪ್ರಾಣಿಯಲ್ಲ.ತಮ್ಮಸಂತೋಷ- ದುಃಖ ಹಂಚುವ ಪಾಲುದಾರ ಅಷ್ಟೆ ಅಲ್ಲದೇ, ನಾಯಿಯನ್ನು ಮನೆಯ ಸದಸ್ಯನಂತೆ ನೋಡಿಕೊಳ್ಳುವುದು ವಾಡಿಕೆ. ಹೀಗಿರುವಾಗ, ತಾವು ಪ್ರೀತಿಯಿಂದ ಸಾಕಿ ಸಲಹುತ್ತಿದ್ದ 10ಕ್ಕು ಹೆಚ್ಚು ಶ್ವಾನಗಳ ಮಾರಣಹೋಮ ಆಗಿರುವುದನ್ನು ಕಂಡು ಪ್ರಾಣಿ ಪ್ರಿಯರಾದ ಅಲ್ಲಿನ ನಿವಾಸಿಗಳು ಕೆಂಡಾಮಂಡಲರಾಗಿದ್ದು, ನಾಯಿಗಳನ್ನು ಅಮಾನುಷವಾಗಿ ವಿಷವಿಕ್ಕಿ ಕೊಂದ ದುಷ್ಕರ್ಮಿಗಳ ಪತ್ತೆಗೆ ಒತ್ತಾಯ ಮಾಡಿದ್ದಾರೆ.

ಪುತ್ತೂರಿನ ಅಡೆಂಚಿನಡ್ಕ ಕುಂಟ್ಯಾನ, ಸದಾಶಿವ ಕಾಲೋನಿಯಲ್ಲಿನ ನಿವಾಸಿಗಳ ಮನೆಯಲ್ಲಿ ಸಾಕಿರುವ 10ಕ್ಕಿಂತಲೂ ಹೆಚ್ಚು ನಾಯಿ ಮರಿಗಳು ಎರಡು ದಿನಗಳಿಂದ ಏಕಾಏಕಿ ನಾಪತ್ತೆಯಾಗಿದ್ದವು. ಇಲ್ಲಿನ ನಿವಾಸಿಗಳು ಅವುಗಳಿಗೆ ಸಮಯಕ್ಕೆ ಸರಿಯಾಗಿ ಅನ್ನ(Food), ನೀರು, ಇತರ ಆಹಾರ ನೀಡುತ್ತಾರಂತೆ.ನಾಯಿಗಳನ್ನು ಕಟ್ಟಿ ಹಾಕುವುದಿಲ್ಲ. ಹಾಗಾಗಿ, ಅವು ಸಾಮೂಹಿಕವಾಗಿ ಅಲ್ಲೇ ಅಡ್ಡಾಡಿಕೊಂಡಿರುತ್ತವೆ. ಹೀಗಾಗಿ, ಈ ನಾಯಿಗಳನ್ನು ಸಾಕಿದ್ದವರು ನಾಯಿಗಳು ಒಂದು ದಿನ ಕಳೆದರೂ ಬರದ ಹಿನ್ನೆಲೆ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಆದರೆ, ಆಗಸ್ಟ್ 6ರಂದು ರಸ್ತೆ ಬದಿಯಲ್ಲಿ ದುರ್ವಾಸನೆ (Bad Smell)ಬರುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ಆ ಪೊದೆಗಳ ಬಳಿ ಹೋದಾಗ ನಾಯಿಗಳ ಶವ ಸಿಕ್ಕಿವೆ ಎಂದು ತಿಳಿದು ಬಂದಿದೆ.

ಪುತ್ತೂರಿನ ಹೊರವಲಯದ ಬನ್ನೂರು ಗ್ರಾಮದ ಅಡೆಂಚಿನ್ಯ, ಕುಂಟ್ಯಾನ, ಸದಾಶಿವ ಕಾಲೋನಿಯಲ್ಲಿರುವ ನಿವಾಸಿಗಳು ಸಾಕಿರುವ ನಾಯಿಗಳಿಗೆ ಹೊರಗಡೆ ಅಡ್ಡಾಡುವ ಸಂದರ್ಭ ಸಾಮೂಹಿಕವಾಗಿ ದುಷ್ಕರ್ಮಿಗಳು ಊಟ ನೀಡಿದ್ದು, ನೀಡಿರುವ ಊಟದಲ್ಲಿ ಇಲ್ಲವೇ ನೀರಿನಲ್ಲಿ ವಿಷ ಬೆರೆಸಿ ನಾಯಿಗಳನ್ನು ವಿಷ ವಿಕ್ಕಿ(Poision )ಕೊಂದಿರುವ ಶಂಕೆ ವ್ಯಕ್ತವಾಗಿದೆ. ನಾಯಿಗಳು ಗುಂಪಾಗಿ ಓಡಾಡುತ್ತಿರುವಾಗಲೇ ಯಾರೋ ಇವುಗಳನ್ನು ಕರೆದು ಊಟ ನೀಡುವ ಹಾಗೆ ಮಾಡಿ ವಿಷ ಹಾಕಿದ್ದು ಸಾಲದೆಂಬಂತೆ ನಾಯಿಗಳ ಕಾಲುಗಳನ್ನು ಕಟ್ಟಿ ಬ್ಯಾಗ್ ಗಳಲ್ಲಿ ತುಂಬಿ ಅಂಡೆಂಚಿಲಡ್ಕ ರಸ್ತೆಯ ಪಕ್ಕದಲ್ಲಿರುವ ಪೊದೆಗಳಲ್ಲಿ ಎಸೆದು ಹೋಗಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ.

ಈ ಪ್ರಕರಣದ ಕುರಿತಂತೆ ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರರಾದ ರಾಜೇಶ್ ಬನ್ನೂರು ಮತ್ತು ಶಶಿಧರ ವಿ.ಎನ್. ಪುತ್ತೂರು ಸಹಾಯಕ ಆಯುಕ್ತರು ಹಾಗೂ ಪುತ್ತೂರು ನಗರ ಪೊಲೀಸ್ ಠಾಣಾಧಿಕಾರಿಗೆ ದೂರು ನೀಡಿದ್ದು, ಈ ರೀತಿ ಸಾಕು ನಾಯಿಗಳ ಮಾರಣ ಹೋಮ ಮಾಡಿದ ಆರೋಪಿಗಳನ್ನು ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು ನಾಯಿಗಳನ್ನು ಸಾಮೂಹಿಕ ಹತ್ಯೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಸತ್ತ ನಾಯಿಗಳ ಮರಣೋತ್ತರ ಶವ ಪರೀಕ್ಷೆ ನಡೆಸಿ ಸಾವಿಗೆ ನೈಜ ಕಾರಣವೇನು ಎಂಬುದನ್ನ ಪತ್ತೆ ಹಚ್ಚಲು ಮನವಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.