Himachal Pradesh: ಮೇಘಸ್ಪೋಟದಲ್ಲಿ ನಲುಗಿದ ದೇವ ಭೂಮಿ ಹಿಮಾಚಲ‌ಪ್ರದೇಶ,ಉತ್ತರಾಖಂಡ ,ಅಪಾರ ಸಾವು-ನೋವು

National news Himachal Pradesh and Uttarakhand cloudburst huge death

Himachal Pradesh: ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನವೇ ಅಸ್ತವ್ಯಸ್ತ ಗೊಂಡಿದೆ. ಭಾರೀ ಮಳೆಯಿಂದಾಗಿ ಭೂಕುಸಿತವಾಗುತ್ತಿದ್ದು,ಜನತೆ ಜೀವ ಭಯದಲ್ಲಿ ದಿನ ಕಳೆಯುವಂತಾಗಿದೆ.

ಹಿಮಾಚಲ ಪ್ರದೇಶದಲ್ಲಿ(Himachal Pradesh) ಉಂಟಾಗಿರುವ ಮೇಘಸ್ಫೋಟದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಮಳೆಯ ಅಬ್ಬರಕ್ಕೆ ರಾಜ್ಯವೇ ಬೆಚ್ಚಿಬಿದ್ದಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.

ಹಿಮಾಚಲ ಪ್ರದೇಶದಲ್ಲಿ ಪ್ರವಾಹಕ್ಕೆ 9,600 ಮನೆಗಳು ಕುಸಿತ ಕಂಡಿವೆ. ಶಿಮ್ಲಾದ ಸಮ್ಮರ್‌ ಹಿಲ್ಸ್‌ನಲ್ಲಿ ಭಾರೀ ಭೂಕುಸಿತವಾಗಿದ್ದು,ಸಂತ್ರಸ್ತರನ್ನು ಏರ್‌ಲಿಫ್ಟ್‌ ಮೂಲಕ ಸುರಕ್ಷಿತ ಸ್ಥಳಕ್ಕೆ ಶಿಫ್ಟ್‌ ಮಾಡಲಾಗಿದೆ. ಅಲ್ಲದೇ ಭೂಕುಸಿತದಿಂದ ಈವರೆಗೂ 60ಕ್ಕೂ ಅಧಿಕ ಜನರು ಪ್ರಾಣಕಳೆದುಕೊಂಡಿದ್ದಾರೆ.
ಶಿಮ್ಲಾದ ಕೃಷ್ಣನಗರದಲ್ಲಿ ಭೂಕುಸಿತದಿಂದ ಮಣ್ಣಿನಲ್ಲಿ 19 ಮೃತದೇಹಗಳು ಹಾಗೂ ಸಮ್ಮರ್ ಹಿಲ್‌ನ ಶಿವ ದೇವಾಲಯದ ಸ್ಥಳದಲ್ಲಿ 12 ಮೃತದೇಹಗಳು, ಫಾಗ್ಲಿಯಲ್ಲಿ ಐದು ಮತ್ತು ಕೃಷ್ಣಾನಗರದಲ್ಲಿ ಎರಡು ಶವಗಳನ್ನು ಹೊರತೆಗೆಯಲಾಗಿದೆ. ಶಿವ ದೇವಾಲಯದಲ್ಲಿ ಇನ್ನೂ 10ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ಇದೆ..ಜನರ ರಕ್ಷಣೆಗೆ ಮುಂದಾಗಿರೋ ಎನ್​ಡಿಆರ್​ಎಫ್​ ಸಿಬ್ಬಂದಿ ಹಲವರನ್ನು ರಕ್ಷಣೆ ಮಾಡಿದ್ದಾರೆ. ಹಲವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಹವಾಮಾನ ವೈಪರೀತ್ಯದ ಹಿನ್ನೆಲೆ ಹಿಮಾಚಲ ಪ್ರದೇಶದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಉತ್ತರಾಖಂಡದಲ್ಲೂ ಪ್ರವಾಹ
ಉತ್ತರಾಖಂಡದಲ್ಲಿ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 6ಕ್ಕೇರಿದೆ. ಅಲ್ಲದೇ 7 ಮಂದಿ ನಾಪತ್ತೆಯಾಗಿದ್ದಾರೆ. ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಉಂಟಾದ ಭೂಕುಸಿತದಲ್ಲಿ ಮೂವರನ್ನು ರಕ್ಷಿಸಲಾಗಿದ್ದು, ಕೆಲವರು ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ.

ಮದ್ಮಹೇಶ್ವರ ಕಣಿವೆಯಲ್ಲಿ ಸಿಲುಕಿದ್ದ 220 ಮಂದಿ ಯಾತ್ರಿಕರ ಪೈಕಿ 122 ಜನರನ್ನ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ. ನಾನೂದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಿ, ರಾನ್ಸಿ ಗ್ರಾಮಕ್ಕೆ ಜನರ ಸ್ಥಳಾಂತರ ಮಾಡಲಾಗಿದೆ. ಇನ್ನುಳಿದವರ ರಕ್ಷಣೆಗೆ ರಕ್ಷಣಾ ಕಾರ್ಯ ಮುಂದುವರೆದಿದೆ. ಮುಂದಿನ ನಾಲ್ಕು ದಿನಗಳ ಕಾಲ ಉತ್ತರಾಖಂಡದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ: 7 ವರ್ಷದ ಬಾಲಕಿ ಮೇಲೆ ದೌರ್ಜನ್ಯ ಎಸಗಿದ ನಿವೃತ್ತ ಪಿಎಸೈ

Leave A Reply

Your email address will not be published.