ಶ್ರೀಲಂಕಾವನ್ನು ಹೀನಾಯವಾಗಿ ಸೋಲಿಸಿ 8ನೇ ಬಾರಿಗೆ ಏಷ್ಯಾಕಪ್ ಮುಡಿಗೇರಿಸಿಕೊಂಡ ಭಾರತ !

ಕೊಲಂಬೊ: ಏಷ್ಯಾಕಪ್ 2023 ರ ಫೈನಲ್ ಪಂದ್ಯದಲ್ಲಿ ಲಂಕಾ ತಂಡವನ್ನು ಮಣಿಸಿ ಭಾರತ ಏಷ್ಯಾಕಪ್ ಮುಡಿಗೇರಿಸಿಕೊಂಡಿದೆ. 8ನೇ ಬಾರಿಗೆ ಏಷ್ಯಾಕಪ್ ಭಾರತದ ಪಾಲಾಗಿದೆ.

ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾಗೆ ಭಾರತೀಯ ಬೌಲರ್ ಗಳು ನಿರಂತರವಾಗಿ ಕಾಡಿದರು. ಬೌಲರ್ಗಳ ಆಟಕ್ಕೆ ಲಂಕಾ 50 ರನ್ ಗಳಿಗೆ ಆಲೌಟ್ ಆಗಿದ್ದು ಭಾರತಕ್ಕೆ 51 ರನ್ ಗಳ ಗುರಿ ನೀಡಿತ್ತು. ಸುಲಭ ಮೊತ್ತದ ಗುರಿ ಬೆನ್ನಟ್ಟಿದ ಭಾರತ 6.1 ಓವರ್ ಗೆ ವಿಕೆಟ್ ನಷ್ಟವಿಲ್ಲದೆ 51 ರನ್ ಬಾರಿಸುವ ಮೂಲಕ ಗೆಲುವಿನ ಕೇಕೆ ಹಾಕಿ ನಕ್ಕಿತು. ಭಾರತದ ಪರ ಇಶಾನ್ ಕಿಶನ್ ಅಜೇಯ 23 ರನ್ ಗಳಿಸಿದರೆ ಶುಭ್ಮನ್ ಗಿಲ್ ಅಜೇಯ 27 ರನ್ ಬಾರಿಸಿದ್ದಾರೆ.

ಮೊದಲ ಓವರ್‌ನಲ್ಲಿಯೇ ಮೂರನೇ ಎಸೆತದಲ್ಲಿ ಕುಸಲ್ ಪೆರೆರಾ ಅವರನ್ನು ಔಟ್ ಮಾಡುವ ಮೂಲಕ ಜಸ್ಪ್ರೀತ್ ಬುಮ್ರಾ ಶ್ರೀಲಂಕಾಕ್ಕೆ ಮೊದಲ ಮತ್ತು ದೊಡ್ಡ ಹೊಡೆತ ನೀಡಿದರು. ಇದಾದ ನಂತರ, ಸಿರಾಜ್ ಅವರು ಕೂಡಾ ತಮ್ಮ ಮೊದಲ ಓವರ್‌ನಲ್ಲಿ ಮೇಡನ್ ಪಡೆದರು. ನಂತರದ ಓವರ್‌ನಲ್ಲಿ ಅವರು ನಾಲ್ಕು ವಿಕೆಟ್‌ಗಳನ್ನು ಪತಪತ ಉದುರಿಸಿದರು. ತನ್ಮೂಲಕ ಶ್ರೀಲಂಕಾ ಅಲ್ಪಮೊತ್ತಕ್ಕೆ ಕುಸಿಯುವಂತೆ ಮಾಡಿದರು.

ತಮ್ಮ ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಮೊಹಮ್ಮದ್ ಸಿರಾಜ್ ಅವರು ರವೀಂದ್ರ ಜಡೇಜಾಗೆ ಪಾಥುಮ್ ನಿಸ್ಸಾಂಕ ಕ್ಯಾಚ್ ನೀಡಿದರು. ಬಳಿಕ ಮೂರನೇ ಎಸೆತದಲ್ಲಿ ಸದಿರಾ ಔಟಾದರು. ಅಸಲಂಕಾ ನಾಲ್ಕನೇ ಎಸೆತದಲ್ಲಿ ಪೆವಿಲಿಯನ್‌ಗೆ ಹಾದಿ ಕಂಡರು. ಸಿರಾಜ್ ಹ್ಯಾಟ್ರಿಕ್ ಮಿಸ್ ಮಾಡಿಕೊಂಡರೂ, ಕೊನೆಯ ಎಸೆತದಲ್ಲಿ ಧನಂಜಯ್ ಗೆ ಪೆವಿಲಿಯನ್ ಹಾದಿ ತೋರಿಸಿ ನಾಲ್ಕನೇ ವಿಕೆಟ್ ಪಡೆದರು.

ಲಂಕಾ ಪರ ಬ್ಯಾಟಿಂಗ್ ನಲ್ಲಿ ಯಾರೊಬ್ಬರೂ ದೃಢವಾಗಿ ನಿಲ್ಲಲಿಲ್ಲ. ಕುಶಾಲ್ ಮೆಂಡಿಸ್ 17 ಮತ್ತು ದುಶನ್ ಹೇಮಂತ್ 13 ರನ್ ಸಿಡಿಸಿದ್ದು ಬಿಟ್ಟರೆ ಮತ್ಯಾರು ಎರಡಂಕಿ ಕೂಡಾ ದಾಟಲಿಲ್ಲ. ಭಾರತ ಪರ ಬೌಲಿಂಗ್ ನಲ್ಲಿ ಮೊಹಮ್ಮದ್ ಸಿರಾಜ್ 6, ಹಾರ್ದಿಕ್ ಪಾಂಡ್ಯ 3 ಮತ್ತು ಜಸ್ ಪ್ರೀತ್ ಬುಮ್ರಾ 1 ವಿಕೆಟ್ ಪಡೆದಿದ್ದು, ಗೆಲುವಿನಲ್ಲಿ ತಮ್ಮದೇ ಪಾತ್ರ ವಹಿಸಿದ್ದಾರೆ.

Leave A Reply

Your email address will not be published.