ಕಾರವಾರದಲ್ಲೊಂದು ನಿಗೂಢ ಘಟನೆ; ಬ್ಲೇಡ್ ನಿಂದ ಕೈ ಕೊಯ್ದುಕೊಂಡ 14 ವಿದ್ಯಾರ್ಥಿನಿಯರು; ಜಿಲ್ಲಾಡಳಿತಕ್ಕೆ ತಲೆನೋವಾದ ವಿಚಿತ್ರ ಪ್ರಕರಣ

ಕಾರವಾರ; ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ  ವಿಚಿತ್ರ ಘಟನೆಯೊಂದು ನಡೆದಿದೆ. ಇಲ್ಲಿನ ಖಾಸಗಿ ಶಾಲೆಯೊಂದರ 14 ಜನ ವಿದ್ಯಾರ್ಥಿನಿಯರು ಬ್ಲೇಡ್ ನಿಂದ ಕೈಗೆ ಕೊಯ್ದುಕೊಂಡಿದ್ದು ಕಳೆದ ಶನಿವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಖಾಸಗಿ ಶಾಲೆವೊಂದರ ಹದಿನಾಲ್ಕು ವಿದ್ಯಾರ್ಥಿನಿಯರು ಕೈಯನ್ನು ಬ್ಲೇಡ್‌ನಿಂದ ಸೀಳಿಕೊಂಡಿರುವ ಘಟನೆ ನಡೆದಿದ್ದು. ಕಾರಣ ಮಾತ್ರ ನಿಗೂಢವಾಗಿದ್ದು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ.

ಖಾಸಗಿ ಶಾಲೆಯ ಒಂಬತ್ತು ಹಾಗೂ ಹತ್ತನೇ ತರಗತಿಯ 14  ವಿದ್ಯಾರ್ಥಿನಿಯರು ಹತ್ತರಿಂದ ಹದಿನಾಲ್ಕು ಕಡೆಗಳಲ್ಲಿ ಕೈಗೆ ಬ್ಲೇಡ್ ನಿಂದ ಗಾಯ ಮಾಡಿಕೊಂಡಿದ್ದು, ವಿದ್ಯಾರ್ಥಿನಿಯರ ವಿಚಿತ್ರ ವರ್ತನೆ ಶಾಲಾ ಆಡಳಿತ ಮಂಡಳಿ, ಪೋಷಕರ ಆತಂಕಕ್ಕೆ ಕಾರಣವಾಗಿದೆ. ಗಾಯಗೊಂಡ ಕೆಲವು ವಿದ್ಯಾರ್ಥಿನಿಯರನ್ನು ಕೂಡಲೇ ದಾಂಡೇಲಿ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯವಾಗಿದ್ದಾರೆ.

ಘಟನೆ ಬಳಿಕ ಮಾನಸಿಕ ತಜ್ಞರು ಮಕ್ಕಳೊಂದಿಗೆ ಮಾತನಾಡಿದ್ದು ಮಾನಸಿಕ ತಜ್ಞರಿಗೆ ಈ ಕುರಿತು ಮಾಹಿತಿ ನೀಡಿದಾಗ ಅವರೂ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಓದಿನ ಒತ್ತಡದಿಂದ ಈ ರೀತಿ ಮಾಡಿರಬಹುದು ಎಂದಿದ್ದಾರೆ. ಇನ್ನು ಸ್ಥಳೀಯ ಸರ್ಕಲ್‌ ಇನ್ಸ್‌ಪೆಕ್ಟರ್‌ ಭೀಮಣ್ಣ ಸೂರಿ ಅವರು ಕೂಡ ಮಕ್ಕಳನ್ನು ಕರೆದು ವಿಚಾರಿಸಿದ್ದಾರೆ. ಈ ವೇಳೆ ಒಬ್ಬರು ಒಂದೊಂದು ರೀತಿ  ಹೇಳಿಕೆ ನೀಡಿದ್ದಾರೆ. ನನ್ನ ತಾಯಿಗೆ ಕೆಟ್ಟ ಭಾಷೆಯಿಂದ ಬೈದಿದ್ದೆ. ಅದರ ತಪ್ಪಿಗೆ ಹೀಗೆ ಮಾಡಿಕೊಂಡೆ ಎಂದು ಒಬ್ಬ ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ.ಕೆಲ ದಿನಗಳ ಹಿಂದೆ ತಮ್ಮ ತೀರಿಕೊಂಡಿದ್ದು,  ಆ ನೋವಿನಿಂದ  ಹೊರ ಬರಲು ಆಗದೇ ಹೀಗೆ ಮಾಡಿಕೊಂಡಿದ್ದೇನೆ ಒಬ್ಬಾಕೆ ಹೇಳಿದ್ದಾಳೆ. ನನ್ನ ಸಹಪಾಠಿ ನನ್ನನ್ನು ಮಾತನಾಡಲು ಬಿಡಲಿಲ್ಲ. ಇದರಿಂದ ನನಗೆ ಕೋಪ ಬಂತು. ಆದರೆ ಸ್ನೇಹಿತೆಗೆ ತೊಂದರೆ ಕೊಡುವ ಬದಲು ನಾನೇ ಶಿಕ್ಷೆ  ಕೊಟ್ಟುಕೊಳ್ಳೋಣ ಎಂದು ಕೈಗೆ ಗಾಯ ಮಾಡಿಕೊಂಡಿರುವುದಾಗಿ ತಿಳಿಸಿದ್ದಾಳೆ. ನಾನು ಕತ್ತರಿಸಿಕೊಂಡಿದ್ದನ್ನು ನೋಡಿ ಆಕೆಯೂ ಕೈ ಕತ್ತರಿಸಿಕೊಂಡಿದ್ದಾಳೆ ಎಂದಿದ್ದಾಳೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಪಿ ವಿಷ್ಣುವರ್ಧನ್ ಅವರು ಒಂದೇ ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಹೀಗೆ ಮಾಡಿಕೊಂಡಿರುವುದು ಆತಂಕಕಾರಿ.ಶಿಕ್ಷಣ, ಪೊಲೀಸ್‌ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಸಭೆಯನ್ನು ಕರೆಯುತ್ತಿದ್ದೇವೆ. ಮಕ್ಕಳ ವರ್ತನೆಗೆ ನಿಖರ ಕಾರಣ ಗೊತ್ತಾಗಿಲ್ಲ.ಅವರು ಭಿನ್ನ ಉತ್ತರವನ್ನು ವಿಚಾರಣೆ ವೇಳೆ ಕೊಟ್ಟಿದ್ದಾರೆ. ವೃತ್ತಿಪರ ಮಾನಸಿಕ ತಜ್ಞರಿಗೂ ಈ ಘಟನೆಗಳನ್ನು ತಿಳಿಸಿ ವರದಿ ನೀಡುವಂತೆ ಕೋರಲಾಗಿದೆ ಎಂದಿದ್ದಾರೆ.

ಇನ್ನು ಘಟನೆ ಬಗ್ಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಪ್ರತಿಕ್ರಿಯೆ ನೀಡಿದ್ದು ಮಕ್ಕಳು ಯಾವ ಕಾರಣಕ್ಕಾಗಿ ಕೈ ಕೊಯ್ದುಕೊಂಡಿದ್ದಾರೆ ಎಂದು ಸ್ಪಷ್ಟ ಮಾಹಿತಿ ನೀಡುತ್ತಿಲ್ಲ.ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ ತಹಶೀಲ್ದಾರ್‌ ಮತ್ತು ಶಿಕ್ಷಣ ಅಧಿಕಾರಿ ಜೊತೆ ಮಾತನಾಡಿ ವರದಿ ಕೊಡುವಂತೆ ಸೂಚನೆ ನೀಡಿದ್ದೆ.ಆದರೆ ವಿದ್ಯಾರ್ಥಿಗಳು ವಿಚಾರಣೆ ವೇಳೆ ಅಧಿಕಾರಿಗಳಿಗೆ ಹಾರಿಕೆ ಉತ್ತರ ಕೊಟ್ಟಿದ್ದಾರೆ ಘಟನೆ ಬಗ್ಗೆ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಯವರಿಗೂ ತನಿಖೆ ಮಾಡಲು ತಿಳಿಸಿದ್ದೇವೆ.

ಶಾಲೆಯಲ್ಲಿ ತೊಂದರೆ ಇದೆಯೇ ಎನ್ನುವ ಬಗ್ಗೆ ತನಿಖೆ ನಡೆಸಿದ್ದೇವೆ. ಆರೋಗ್ಯ ಇಲಾಖೆಯಿಂದ ಮಕ್ಕಳಿಗೆ ಕೌನ್ಸೆಲಿಂಗ್ ಮಾಡಲು ತಿಳಿಸಲಾಗಿದ್ದು, ಕೌನ್ಸಿಲಿಂಗ್ ನಂತರ ಮಕ್ಕಳು ಕೈ ಕೊಯ್ದುಕೊಂಡಿರುವ ಬಗ್ಗೆ ಮಾಹಿತಿ ಸಿಗಲಿದೆ ಎಂದಿದ್ದಾರೆ.

 

Leave A Reply

Your email address will not be published.