ಬಹುಕೋಟಿ ವಂಚನೆ ಪ್ರಕರಣ; ಚೈತ್ರಾ ಹೆಸರಿನಲ್ಲಿ ಕುಂದಾಪುರ ಬಳಸದಂತೆ ಮಾಧ್ಯಮಗಳಿಗೆ ನಿರ್ಬಂಧ!?

 

ಬೆಂಗಳೂರು; ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆ ಆಕೆಯ ಹೆಸರಿನ ಜೊತೆ ಕುಂದಾಪುರ ಇರೋದು ಕುಂದಾಪುರಗರಿಗೆ ಅವಮಾನ ಅನ್ನೋ ಆಕ್ರೋಶ ಹೊರ ಹಾಕಿದ್ದರು. ಆಕೆಯ ಹೆಸರಿಂದ ಕುಂದಾಪುರ ತೆಗಿಬೇಕು ಅನ್ನೋ ಮಾತುಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ಇದೀಗ ಕುಂದಾಪುರ ಹೆಸರು ಬಳಕೆ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಕೋರಿ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯಕ್ಕೆ ವ್ಯಕ್ತಿಯೊಬ್ಬರು ದಾವೆ ಹೂಡಿದ್ದಾರೆ.

ಬೆಂಗಳೂರಿನ ಬಸವನಗುಡಿಯಲ್ಲಿ ಕಾಫಿ ಶಾಪ್‌ ಹೊಂದಿರುವ ಕುಂದಾಪುರ ಮೂಲದ ಗಣೇಶ್‌ ಶೆಟ್ಟಿ ಮೂಲ ದಾವೆ ಹೂಡಿದ್ದಾರೆ. ದಾವೆಯು ಇನ್ನಷ್ಟೇ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಬೇಕಿದೆ. ಮಾಧ್ಯಮಗಳು ತಮ್ಮ ಟಿಆರ್‌ಪಿ, ಲೈಕ್ಸ್ ಮತ್ತು ವ್ಯೂಸ್‌ ಹೆಚ್ಚಿಸುವ ಉದ್ದೇಶದಿಂದ ಕುಂದಾಪುರ ಹೆಸರು ಬಳಸುತ್ತಿವೆ. ದೂರುದಾರರು ಕುಂದಾಪುರ ಮೂಲದವರಾಗಿದ್ದು, ಹೋಟೆಲ್ ನಡೆಸುತ್ತಿದ್ದು, ಹೋಟೆಲ್ ಗೆ ಬರುವ ಗ್ರಾಹಕರು ಕುಂದಾಪುರ ಬಗ್ಗೆ ವಿಚಾರಿಸತೊಡಗಿದ್ದಾರೆ. ಇದರಿಂದ ಕುಂದಾಪುರ ಹೆಸರಿಗೆ ಅವಮಾನವಾಗುತ್ತಿದೆ. ಈ ಒಂದು ಘಟನೆಯಿಂದ ಅಲ್ಲಿನ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಬಹುದು ಎಂದು ದಾವೆಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಚೈತ್ರಾ ಬಗ್ಗೆ ಸುದ್ದಿ ಪ್ರಸಾರ ಮಾಡುವಾಗ ಕುಂದಾಪುರ ಎಂದು ಉಲ್ಲೇಖಿಸದಂತೆ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ಮಾಡಬೇಕು. ಈಗಾಗಲೇ ಕುಂದಾಪುರ ಹೆಸರು ಉಲ್ಲೇಖಿಸಿ ಪ್ರಸಾರ ಮಾಡಿರುವ ಸುದ್ದಿ, ವೀಡಿಯೋ, ಲೇಖನ, ಪೋಸ್ಟ್, ಲಿಂಕ್‌ಗಳನ್ನು ಶಾಶ್ವತವಾಗಿ ತೆಗೆದುಹಾಕುವಂತೆ ಸೂಚಿಸಬೇಕು ಎಂದು ದಾವೆದಾರ ಕೋರಿದ್ದಾರೆ. ದಾವೆದಾರ ಪರ ವಕೀಲ ಎಚ್‌ ಪವನ ಚಂದ್ರ ಶೆಟ್ಟಿ ವಕಾಲತ್ತು ಹಾಕಿದ್ದಾರೆ.

 

Leave A Reply

Your email address will not be published.