Spider bites: ಜೇಡ ಕಚ್ಚಿ ಪ್ರಸಿದ್ಧ ಗಾಯಕ ಸಾವು! – ನಿಜವಾಗಿಯೂ ಜೇಡ ಅಷ್ಟೊಂದು ವಿಷಕಾರಿಯೇ?

Health news are spiders really that poisonous how to treat spider bites here is information

Spider bites: ಇತ್ತೀಚಿಗೆ ಬ್ರೆಜಿಲ್ ನ ಪ್ರಸಿದ್ಧ ಗಾಯಕನೋರ್ವ ಜೇಡ ಕಚ್ಚಿದ ಕಾರಣದಿಂದಾಗಿ ಸಾವನ್ನಪ್ಪಿರುವ ಘಟನೆಯನ್ನು ನೀವು ಕೇಳಿರಬಹುದು.‌ ಅರೆ, ಜೇಡ ಕಚ್ಚಿದರೂ ಪ್ರಾಣಕ್ಕೆ ಕಂಟಕವೇ ಎಂಬ ಪ್ರಶ್ನೆ ನಿಮ್ಮಲ್ಲಿ‌ಕುತೂಹಲ ಮೂಡಿಸಿರಬಹುದು.
ಹೌದು, ಜೇಡ ಕಚ್ಚಿದರೂ (Spider bites) ಸಾವಾಗಬಲ್ಲದು. ಹಾಗಾದರೆ ಜೇಡ ಕಚ್ಚಿದರೆ ಅಷ್ಟೊಂದು ವಿಷಕಾರಿಯೇ? ಇದಕ್ಕೆ ಮನೆ ಮದ್ದುಗಳೇನು ಎಂದು ನೋಡೋಣ ಬನ್ನಿ.

ಎಲ್ಲಾ ಜೇಡಗಳು ವಿಷಕಾರಿಯೇ?
ಜೇಡಗಳಲ್ಲಿ ತುಂಬಾ ವಿಧಗಳಿವೆ. ಹೆಚ್ಚಿನವುಗಳು ವಿಷಕಾರಿಯಲ್ಲ. ಆದರೆ ಕೆಲವೊಂದು ಜೇಡಗಳು ತುಂಬಾನೇ ವಿಷಯುಕ್ತವಾಗಿರುತ್ತದೆ. ಸಾಮಾನ್ಯವಾಗಿ ಜೇಡ ಕಚ್ಚಿದರೆ ಆ ಭಾಗದಲ್ಲಿ ಕೆಲವರಿಗೆ ನೋವು ಅಥವಾ ತುರಿಕೆ ಕಂಡು ಬರುತ್ತದೆ. ಅದು ಹೆಚ್ಚಾಗಿ ಒಂದು ವಾರದೊಳಗೆ ಉಪಶಮನವಾಗುತ್ತದೆ. ಆದರೆ ಕೆಲವೊಂದು ಜೇಡಗಳು ಕಚ್ಚಿದರೆ ಅದರಿಂದ ತುಂಬಾನೇ ಅನಾರೋಗ್ಯ ಉಂಟಾಗುತ್ತದೆ.

ಜೇಡ ಕಚ್ಚಿದೆ ಎಂದು ಹೇಗೆ ತಿಳಿಯುತ್ತದೆ?
ಜೇಡ ಕಚ್ಚಿದ ಭಾಗದಲ್ಲಿ ಊತ ಕಂಡು ಬರುತ್ತದೆ. ಆ ಭಾಗವು ಕೆಂಪಾಗಿದ್ದು, ಕಚ್ಚಿದ ಗುರುತು ಗೋಚರಿಸುತ್ತದೆ.

ಜೇಡ ಕಚ್ಚಿದ ನಂತರ ಮುಖ್ಯವಾಗಿ ಆಗುವ ಸಮಸ್ಯೆಗಳೇನು?
ಜೇಡ ಕಚ್ಚಿದ ಭಾಗದಲ್ಲಿ ಹೆಚ್ಚಾದ ತುರಿಕೆ, ಗಾಯದ ಸುತ್ತ ನೋವು ಇರುತ್ತದೆ. ಹೆಚ್ಚಾಗಿ ಬೆವರುವುದು, ತಲೆನೋವು, ಜ್ವರ ಹಾಗೂ ಮೈತುಂಬಾ ಚಳಿ ಇರುತ್ತದೆ. ಅಸ್ವಸ್ಥತೆ ಹೆಚ್ಚಾಗಿ ರಕ್ತದೊತ್ತಡ ಅತ್ಯಧಿಕವಾಗುವ ಸಾಧ್ಯತೆ ಇರುತ್ತದೆ.

ಹಾಗಾದರೆ ಜೇಡ ಕಚ್ಚಿದಾಗ ಏನು ಮಾಡಬೇಕು?
ಜೇಡ ಕಚ್ಚಿದೆ ಎಂದು ಖಚಿತವಾದ ತಕ್ಷಣ ಗಾಯವಾದ ಜಾಗದಲ್ಲಿ ಐಸ್ ತುಂಡನ್ನು ಕನಿಷ್ಠ 10 ನಿಮಿಷಗಳ ಕಾಲ ಇಡಬೇಕು. ಹೀಗೆ ಹಲವಾರು ಬಾರಿ ಪುನರಾವರ್ತಿಸಿ. ಗಾಯವಿರುವ ಭಾಗವನ್ನು ಆದಷ್ಟು ಹೃದಯದ ಮಟ್ಟಕ್ಕಿಂತಲೂ ಮೇಲೆ ಇರುವಂತೆ ನೋಡಿಕೊಳ್ಳಬೇಕು. ಇದರಿಂದ ಊತವನ್ನು ಕಡಿಮೆ ಮಾಡಬಹುದು. ಹಾಗೂ ಜೇಡ ಕಚ್ಚಿದ ಭಾಗವನ್ನು ನೀರಿನಿಂದ ಹಾಗೂ ಸೋಪಿನಿಂದ ತೊಳೆಯಬೇಕು. ಇದು ಸೋಂಕನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

ಕಂದು ಬಣ್ಣದ ಜೇಡ ಕಚ್ಚಿದರೆ ಯಾವ ರೀತಿ ಅಪಾಯಗಳಿರುತ್ತವೆ?
ಒಂದು ವೇಳೆ ಕಂದು ಬಣ್ಣದ ಜೇಡರ ಹುಳು ಕಚ್ಚಿದರೆ 2 ರಿಂದ 8 ಗಂಟೆಯವರೆಗೆ ಯಾವುದೇ ರೀತಿಯ ಪ್ರಭಾವಗಳು ಗೋಚರಿಸುವುದಿಲ್ಲ. ನಂತರ ನಿಧಾನವಾಗಿ ತುರಿಕೆ ಹಾಗೂ ನೋವು ಕಂಡು ಬರುತ್ತದೆ. ಚಳಿಜ್ವರ ಕೂಡ ಹೆಚ್ಚಾಗುತ್ತದೆ. ಒಂದು ವೇಳೆ ತಕ್ಷಣ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಜೇಡದಿಂದ ಕಚ್ಚಿಸಿಕೊಂಡ ವ್ಯಕ್ತಿ ಕೋಮಾಗೆ ಜಾರಬಹುದು. ಅಥವಾ ಕಾಮಲೆ ರೋಗ, ಕಿಡ್ನಿ ಫೇಲ್ಯೂರ್ ಮುಂತಾದ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ. ಮೂತ್ರ ವಿಸರ್ಜನೆ ಮಾಡುವಾಗ ರಕ್ತ ಕಾಣಿಸಿಕೊಳ್ಳುವ ಸಂಭವವಿರುತ್ತದೆ.

ಕಪ್ಪು ಜೇಡ ಕಚ್ಚಿದರೆ ಯಾವ ರೀತಿ ಅಪಾಯಗಳಿರುತ್ತವೆ?
ಕಪ್ಪು ಜೇಡ ಕಚ್ಚಿದ ಭಾಗದಲ್ಲಿ ಉರಿನೋವು, ತಲೆನೋವು, ಅಧಿಕ ರಕ್ತದೊತ್ತಡ, ಬೆವರುವುದು, ಬಾಯಿಯಲ್ಲಿ ಎಂಜಲು ಬರುವುದು, ಅಸ್ವಸ್ಥತೆ ಹಾಗೂ ಮರಗಟ್ಟಿದ ಅನುಭವ ಉಂಟಾಗುತ್ತದೆ.

ಇನ್ನು ಹೋಬೋ ಜೇಡ ಕಚ್ಚಿದರೆ, ಆ ಭಾಗ ಕೆಂಪಾಗುತ್ತದೆ, ಕಣ್ಣುಗಳು ಕೆಂಪಾಗಿ ಮೈಕೈ ನೋವು ಹೆಚ್ಚಾಗುತ್ತದೆ. ತಲೆನೋವು, ವಾಂತಿ ಹಾಗೂ ಮೈ ಬೆವರುವ ಲಕ್ಷಣಗಳು ಕಂಡುಬರುತ್ತವೆ.
ಅತಿ ಹೆಚ್ಚು ವಿಷಕಾರಿಯಾಗಿರುವ ಜೇಡಗಳೆಂದರೆ, ಕೆಮಲ್ ಸ್ಪೈಡರ್ ಹಾಗೂ ಬ್ರೆಜಿಲಿಯನ್ ಸ್ಪೈಡರ್. ಮೈತುಂಬ ರೋಮ-ರೋಮ ಇರುವ Tarantula spider ವಿಷಕಾರಿಯಾಗಿರುತ್ತದೆ.

ಜೇಡ ಕಚ್ಚಿದ ನಂತರ ವೈದ್ಯರನ್ನು ಸಂಪರ್ಕಿಸಲೇಬೇಕಾದ ಸಂದರ್ಭ ಯಾವುದು?
ಸ್ಪೈಡರ್ ಕಚ್ಚಿದ ನಂತರ ತುಂಬಾ ಚಳಿ ಜ್ವರ ಇದ್ದರೆ, ಉಸಿರಾಟದ ತೊಂದರೆ ಉಂಟಾದರೆ, ಅತಿಯಾದ ನೋವು ಅಥವಾ ಸ್ನಾಯುಗಳ ಸೆಳೆತ ಹೆಚ್ಚಾದರೆ ಅಥವಾ ಪ್ರಜ್ಞೆ ತಪ್ಪುವುದು ಮುಂತಾದ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ:ಕುರ್ಚಿ ಕೆಳಗೆ ಇಟ್ಟಿದ್ದ ಪಟಾಕಿಗೆ ಆಕಸ್ಮಿಕ ಬೆಂಕಿ: ಕುರ್ಚಿ ಸಮೇತ ಎಗರಿ ಬಿದ್ದು ಯುವಕ ಸಾವು !

 

Leave A Reply

Your email address will not be published.