Hanur leopard poaching: ಬೇಟೆಗಾರರನ್ನೇ ಬೇಟೆಯಾಡಿದ ಪೊಲೀಸರು ! ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾದ್ರೂ ಹೇಗೆ ?

Chamarajanagar news hanur two accused of leopard poaching arrested latest news

Hanur leopard poaching : ಅಕ್ರಮ ಬೇಟೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ತನ್ನ ಕಾರ್ಯಕ್ಷಮತೆಯನ್ನು ತೋರುವ ಮೂಲಕ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾದ ಘಟನೆಯೊಂದು ಚಾಮರಾಜನಗರದಲ್ಲಿ ನಡೆದಿದೆ. ಈ ಘಟನೆಯಲ್ಲಿ ಚಿರತೆಯನ್ನು ಬೇಟೆಯಾಡಿದ(Hanur leopard poaching ) ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಗಾದ್ರೆ ಈ ಘಟನೆ ಹೇಗೆ ನಡೆಯಿತು? ಪೊಲೀಸ್ರು ಹೇಗೆ ಬಲೆ ಬೀಸಿದ್ರು ಅನ್ನೋ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.

ಕೆಲವು ವ್ಯಕ್ತಿಗಳು ನಾಡ ಬಂದೂಕನ್ನು ಹಿಡಿದುಕೊಂಡು ಬೇಟೆಗೆ ಹೋಗಿರುವ ಬಗ್ಗೆ ಮಾಹಿತಿಯೊಂದು ಕ್ರೈಂ ಇನ್ವೆಸ್ಟಿಗೇಶನ್ಸ್ ದಳದ ಪೊಲೀಸರ ಕಿವಿಗೆ ಬಿದ್ದಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಅಪರಾಧ ಪತ್ತೆ ದಳ ಹಾಗೂ ಕೆಲವು ಪೊಲೀಸ್ ಅಧಿಕಾರಿಗಳ ತಂಡ ಬೇಟೆಗಾರರ ಬೇಟೆಗೆಂದು ಬಲೆ ಬೀಸಿತ್ತು. ತಮ್ಮ ಯೋಜನೆಯಂತೆ ಮಾಧವನಹಳ್ಳಿ, ಕೊತ್ತನೂರು ಮತ್ತು ಚಿಕ್ಕಲೂರಿನ ಕೆಲವು ಸಂಶಯಾಸ್ಪದ ಸ್ಥಳಗಳಲ್ಲಿ ಕ್ರೈಂ ಇನ್ವೆಸ್ಟಿಗೇಷನ್ ಸ್ಕ್ವಾಡ್ ಮತ್ತು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಅಧಿಕಾರಿಗಳ ತಂಡ ಗಸ್ತಿನಲ್ಲಿ ತಿರುಗಾಡುತ್ತಿದ್ದರು.

ಇದೇ ಹೊತ್ತಿನಲ್ಲಿ ಶನಿವಾರ ಮುಂಜಾನೆ ಸರಿಸುಮಾರು 5 ರ ಹೊತ್ತಿಗೆ ಪಾಳ್ಯ ಗ್ರಾಮದ ಕಡೆಯಿಂದ ಆರೋಪಿಗಳಾದ ಶಾಂತರಾಜು ಮತ್ತು ಅರುಣ್ ವಿಚಿತ್ರ ವಾಹನದಲ್ಲಿ ಕೆಲವು ವಸ್ತುಗಳನ್ನು ಇಟ್ಕೊಂಡು ಸಂಶಯಾಸ್ಪದವಾಗಿ ಬರ್ತಾ ಇದ್ರು. ಈ ವೇಳೆ ಪರಿಶೀಲಿಸಿದಂತಹ ಪೊಲೀಸರಿಗೆ ಸಿಕ್ಕಿದ್ದು, ಸ್ಪೋಟಕ ವಸ್ತುಗಳ ಜೊತೆಗೆ ಎರಡು ನಾಡ ಬಂದೂಕು. ಬಳಿಕ ವಿಚಾರಣೆಗೆ ಒಳಪಡಿಸಿದಾಗ ಸ್ಪೋಟಕ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.

ಹೆಚ್ಚಿನ ವಿಚಾರಣೆಯಲ್ಲಿ ಬಾಯ್ಬಿಟ್ಟಂತಹ ಬಂಧಿತರು, ತಾವಿಬ್ಬರೂ ಕಳೆದ ನಾಲ್ಕು ದಿನಗಳ ಹಿಂದೆಯೇ ನಟರಾಜು ಎಂಬ ವ್ಯಕ್ತಿ ಜೊತೆಗೆ ಸೇರಿ ಚಿರತೆಯೊಂದನ್ನು ಬೇಟೆಯಾಡಿರುವ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಆರೋಪಿಗಳ ಹೇಳಿಕೆಯಂತೆ, ಕಾವೇರಿಪುರದ ಕಗ್ಗಲಿಪುರ ಅರಣ್ಯ ಪ್ರದೇಶದಲ್ಲಿ ಎರಡು ನಾಡ ಬಂದು ಜೊತೆ ಬೇಟೆಗಾಗಿ ಹೋಗಿದ್ದ ಅವರು, ಅರಣ್ಯ ಪ್ರದೇಶದಲ್ಲಿ ಚಿರತೆಯೊಂದನ್ನು ಭೇಟೆ ಆಡಿದ್ದಾರೆ. ಬೇಟೆಯ ನಂತರ ಅದರ ಚರ್ಮವನ್ನು ಸುಲಿಯುವ ವೇಳೆಗೆ ತಮ್ಮ ಹತ್ತಿರ ಯಾರೋ ಬರುತ್ತಿರುವಂತೆ ಶಬ್ದ ಕೇಳಿದೆ. ಇದರಿಂದ ತಾವು ಸಿಕ್ಕಿಹಾಕಿಕೊಳ್ಳುತ್ತೇವೆ ಅಂತ ಭಯಗೊಂಡ ಅವರು, ಮೃತ ಚಿರತೆಯ ದೇಹವನ್ನು ಅಲ್ಲಿಯೇ ಬಿಟ್ಟು ಚಿರತೆಯ ಎರಡು ಕಾಲುಗಳನ್ನು ಕತ್ತರಿಸಿಕೊಂಡು ಬಂದಿದ್ದಾರೆ.

ಹೀಗೆ ನಾಲ್ಕೈದು ದಿನಗಳ ನಂತರ ಎರಡು ಬಂದೂಕುಗಳು ಮತ್ತು ಸ್ಪೋಟಕ ವಸ್ತುಗಳನ್ನು ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೊಳ್ಳೇಗಾಲ ಕ್ಷೇತ್ರ ವ್ಯಾಪ್ತಿಯ ದೊಡ್ಡಿಂದುವಾಡಿ ಗ್ರಾಮದ ಶಾಂತರಾಜು ಮತ್ತು ಅರುಣ್ ಎಂಬುವವರೇ ಬಂಧಿತ ಆರೋಪಿಗಳಾಗಿದ್ದು, ನಾಪತ್ತೆ ಆಗಿರುವ ಮತ್ತೊಬ್ಬ ಆರೋಪಿ ನಟರಾಜು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗೂ ಮುಂದಿನ ಕ್ರಮ ಕೈ ಗೊಂಡಿದ್ದಾರೆ.

ಈ ದಾಳಿಯು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೋ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ. ಜೆ.ಉದೇಶ್ , ಡಿವೈಎಸ್ಪಿ ಸೋಮೇಗೌಡ ಅವರ ಮಾರ್ಗದರ್ಶನದಲ್ಲಿ ಜರುಗಿದ್ದು, ದಾಳಿಯಲ್ಲಿ ಕೊಳ್ಳೇಗಾಲ ವೃತ ನಿರೀಕ್ಷಕರಾದ ಕೃಷ್ಣಪ್ಪ, ಸಬ್ ಇನ್ಸ್ಪೆಕ್ಟರ್ ಗಣೇಶ್ ಮತ್ತು ಚೆಲುವರಾಜು ಹಾಗೂ ಇನ್ನೂ ಹೆಚ್ಚಿನ ಪೋಲಿಸ್ ಸಿಬ್ಬಂದಿಗಳು ತೊಡಗಿಕೊಂಡಿದ್ದಾರೆ. ಹಾಗೂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೋ ಅವರು ಶ್ಲಾಘಿಸಿ, ನಗದು ಬಹುಮಾನ ಘೋಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬರುತ್ತಿದೆ ಶುಗರ್’ನ ಹೊಸ ರೂಪಾಂತರ ! ಎಚ್ಚರಿಸಿದ ವೈದ್ಯರು ಹೇಳಿದ್ದೇನು?

Leave A Reply

Your email address will not be published.