Gruha Lakshmi Scheme: ಗೃಹಲಕ್ಷ್ಮಿ ಹಣ ಚೆಕ್ ಮಾಡಲು ಹೋದ ಮಹಿಳೆಗೆ ಬಿಗ್ ಶಾಕ್ ! ಈ ರೀತಿ ನಿಮ್ಗೂ ಮೋಸ ಆಗ್ಬಹುದು ಎಚ್ಚರ !

ಸರ್ಕಾರದಿಂದ ಜಮಾ ಆಗಲಿರುವ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆಯೇ ಎಂದು ಪರಿಶೀಲಿಸಲು ಹೋದ ಮಹಿಳೆಯೊಬ್ಬರಿಗೆ ತನ್ನ ಬ್ಯಾಂಕ್ ಬ್ಯಾಲೆನ್ಸ್ ನೋಡಿ ಶಾಕ್ ಆಗಿದೆ. ಬ್ಯಾಂಕ್ ನಲ್ಲಿ ಕೂಡಿ ಇಟ್ಟಿದ್ದ ಹಣ ಕಾಣೆಯಾಗಿರುವುದನ್ನು ನೋಡಿ ಮಹಿಳೆ ಕಣ್ಣೀರಿಟ್ಟಿದ್ದಾಳೆ. ಈ ಘಟನೆಯು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ನಡೆದಿದ್ದು, ಹಣವಂಚನೆಯ ಆರೋಪ ವರದಿಯಾಗಿದೆ.

ಕುಂದಗೋಳ ತಾಲೂಕಿನ ಯರಿನಾರಾಯಣಪುರದ ಮಲ್ಲವ್ವ ಮುಳ್ಳಹಳ್ಳಿ ಎಂಬವರು ಮೋಸಕ್ಕೆ ಒಳಗಾದ ಮಹಿಳೆಯಾಗಿದ್ದು, ಇವರ ಬ್ಯಾಂಕ್ ಖಾತೆಯಲ್ಲಿದ್ದ ಬರೋಬ್ಬರಿ 64 ಸಾವಿರ ರೂಪಾಯಿ ಮಂಗಮಾಯವಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣದ ವಿಚಾರವಾಗಿ ಪರಿಶೀಲಿಸಲು ಯರಗುಪ್ಪಿಯ ಕೆ.ವಿ.ಜಿ. ಬ್ಯಾಂಕಿಗೆ ಹೋದ ಸಂದರ್ಭದಲ್ಲಿ ಮಹಿಳೆಗೆ ತನ್ನ ಖಾತೆಯಲ್ಲಿ ಹಣ ಮಾಯವಾಗಿರುವ ವಿಷಯ ಬೆಳಕಿಗೆ ಬಂದಿದೆ. ಸುಣ್ಣದ ಕಲ್ಲಿನ ವ್ಯಾಪಾರದ ಜೊತೆಗೆ ಕೂಲಿ ಮಾಡಿ ಹಣ ಸಂಪಾದಿಸಿದ ಮಹಿಳೆ ತನ್ನ ಗಂಡ ಕುಡಿದು ಎಲ್ಲಾ ಹಣವನ್ನು ಪೋಲು ಮಾಡುತ್ತಾನೆ ಎಂದು ತಾನು ದುಡಿದ ಹಣವನ್ನು ಖಾತೆಯಲ್ಲಿ ಇಟ್ಟಿದ್ದರು. ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವು ಇದೇ ಖಾತೆಯಲ್ಲಿತ್ತು.

ಆದರೆ ತನ್ನ ಉಳಿತಾಯ ಖಾತೆಯನ್ನು ಪರಿಶೀಲಿಸಿದಾಗ ಅದರಲ್ಲಿ 64,000 ರೂಪಾಯಿಗಳು ಕಮ್ಮಿಯಾಗಿತ್ತು. ಗಾಬರಿಗೊಂಡು ಇನ್ನೊಂದು ಸಲ ಪರಿಶೀಲನೆ ನಡೆಸಿದರು. ತನ್ನ ಖಾತೆಯಲ್ಲಿ ಹಣವಿಲ್ಲ ಎಂಬುದಾಗಿ ಖಾತ್ರಿ ಆದ ಕಾರಣ ಮಹಿಳೆ ಪೆಚ್ಚುಮೋರೆ ಹಾಕಿಕೊಳ್ಳುವಂತಾಗಿದ್ದು, ಈ ಕುರಿತು ಬ್ಯಾಂಕ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಈ ಕುರಿತು ತಮಗೇನೂ ಗೊತ್ತಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದ್ದರಿಂದ ಮಹಿಳೆ ಕಣ್ಣೀರು ಹಾಕುತ್ತಾ, ಪೊಲೀಸರ ಮೊರೆ ಹೋಗಿದ್ದಾಳೆ.

ಈಗ ಹಣ ಕಳೆದುಕೊಂಡಿರುವ ಮಲ್ಲವ್ವ ಹಿಂದೊಮ್ಮೆ ಕುಂದಗೋಳದ ನೊಂದಣಿ ಕಚೇರಿಯಲ್ಲಿ ಸ್ಥಳ ಖರೀದಿಗಾಗಿ ಹೆಬ್ಬೆಟ್ಟು ಒತ್ತಿದ್ದಳು ಎನ್ನಲಾಗಿದ್ದು, ಆ ದಿನದ ನಂತರ ಮಹಿಳೆಯ ಖಾತೆಯಿಂದ ಹಂತ ಹಂತವಾಗಿ ಹಣ ವರ್ಗಾವಣೆಯಾಗುತ್ತಿತ್ತು. ಆದರೆ ಆಕೆಗೆ ಓಟಿಪಿ ಹಾಗೂ ಹಣ ವರ್ಗಾವಣೆ ಮೆಸೇಜ್ ಬಂದೇ ಇರಲಿಲ್ಲ. ಆದರೂ ಹಣದ ವಂಚಕರು ಆಕೆಯ ಖಾತೆಯಿಂದ ಏಳು ಸಲ ವಿಭಿನ್ನ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದು, ಅಕ್ಟೋಬರ್ 24 ಹಾಗೂ ನವೆಂಬರ್ 3 ರ ನಡುವೆ ಬರೋಬ್ಬರಿ 64,000 ರೂ.ಗಳಷ್ಟು ವಂಚಿಸಲಾಗಿದೆ.

ಹಣ ಕಾಣೆಯಾದ ವಿಷಯ ತಿಳಿದ ಮಹಿಳೆ ಮೊದಲು ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದು, ನಂತರ ಕುಂದಗೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಇದೇ ಮಾದರಿಯ ನಾಲ್ಕೈದು ಪ್ರಕರಣಗಳು ಕುಂದಗೋಳ ತಾಲೂಕಿನಲ್ಲಿ ಈ ಹಿಂದೆಯೂ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದ್ದು, ತಕ್ಷಣ ಅಪರಾಧಿಗಳನ್ನು ಬಂಧಿಸಬೇಕೆಂದು ರೈತ ಮುಖಂಡರಾಗಿರುವ ಶಂಕರಗೌಡ ದೊಡ್ಡಮನಿಯವರು ಬೇಡಿಕೆಯಿಟ್ಟಿದ್ದಾರೆ.

Leave A Reply

Your email address will not be published.