Mysore: ತಿಂಗಳಿಂದ ಆಟ ಆಡಿಸ್ತಿದ್ದ ನರಭಕ್ಷಕ ಹುಲಿ ! ಫಾರೆಸ್ಟ್ ಇಲಾಖೆಗೆ ಸಿಕ್ಕೇಬಿಡ್ತು ನೋಡಿ !

Karnataka district news Tiger catch in Mysore latest news

Mysore: ಬಂಡೀಪುರ ಅರಣ್ಯದ ಕೊನೆಯ ಭಾಗದಲ್ಲಿರುವ ಇಬ್ಬರು ರೈತ ಮಹಿಳೆಯರನ್ನು ಕೊಂದು ಮುಗಿಸಿದ್ದ ನರಭಕ್ಷಕ ಹುಲಿ. ಕಾಡಂಚಿನ ಭಾಗದ ಜನರಿಗೆ ಭಯ ಹುಟ್ಟಿಸಿತ್ತು. ಜನರಿಗೆ ಉಪಟಳವನ್ನು ಉಂಟು ಮಾಡುತ್ತಿದ್ದ ಈ ನರಭಕ್ಷಕ ವ್ಯಾಘ್ರವೊಂದನ್ನು ಅರಣ್ಯ ಇಲಾಖೆಯು ಸೆರೆಹಿಡಿದಿದ್ದು, ಆ ಭಾಗದ ಜನರು ನಿಟ್ಟಿಸಿರು ಬಿಡುವಂತಾಗಿದೆ.

ಸುಮಾರು ಹತ್ತು ವರ್ಷದ ಗಂಡು ಹುಲಿಯೊಂದು ಮೈಸೂರಿನ(Mysore) ನಂಜನಗೂಡು ತಾಲೂಕಿನ ಬಂಡಿಪುರ ಕಾಡಂಚಿನಲ್ಲಿ ರಾಜಾರೋಷವಾಗಿ ತಿರುಗಾಡುತ್ತಿತ್ತು. ದನ ಮೇಯಿಸಲು ಕಾಡಿನ ಅಂಚಿಗೆ ಹೋಗುತ್ತಿದ್ದ ರೈತರನ್ನು ಬಲಿ ತೆಗೆದುಕೊಳ್ಳುತ್ತಿತ್ತು. ತಾಲೂಕಿನ ಬಳ್ಳೂರುಹುಂಡಿ ಗ್ರಾಮದ ಸುಮಾರು 55 ವರ್ಷ ಪ್ರಾಯದ ರತ್ನಮ್ಮ ಎಂಬ ರೈತ ಮಹಿಳೆಯನ್ನು ಬಳಿ ಪಡೆದುಕೊಂಡಿತ್ತು. ರತ್ನಮ್ಮ ನವೆಂಬರ್ 26ರಂದು ಕಾಡಂಚಿನಲ್ಲಿ ದನ ಮೇಯಿಸುತ್ತಿದ್ದ ವೇಳೆ ದಾಳಿ ಮಾಡಿದ ಹುಲಿ ಆಕೆಯನ್ನು ಕೊಂದು ಮೃತ ದೇಹವನ್ನು ಕಾಡಿಗೆ ಎಳೆದೊಯ್ದಿತ್ತು.

ಇದಕ್ಕೂ ಮೊದಲು ಇದೇ ಗ್ರಾಮದ ಮಹಾದೇವನಗರದ ವ್ಯಾಪ್ತಿಯಲ್ಲಿ ದನ ಮೇಯಿಸುತ್ತಿದ್ದ ವೀರಭದ್ರ ಬೋವಿ ಎಂಬವರ ಮೇಲೆ ದಾಳಿ ಮಾಡಿದ್ದು ಅವರಿಗೆ ಗಂಭೀರ ಗಾಯಗಳಾಗಿತ್ತು. ವ್ಯಾಘ್ರದಾಳಿಯಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಅರಣ್ಯ ಇಲಾಖೆಯು ಕಾರ್ಯಾಚರಣೆಯಲ್ಲಿ ತೊಡಗಿತ್ತಾದರೂ ಹುಲಿ ಕಣ್ಣಿಗೆ ಬಿದ್ದಿರಲಿಲ್ಲ. ರತ್ನಮ್ಮನನ್ನು ಹುಲಿ ಹೊತ್ತೊಯ್ದ ವಿಷ್ಯ ತಿಳಿದ ಕೂಡಲೇ ಅರಣ್ಯ ಇಲಾಖೆಯು ಅಲರ್ಟ್ ಆಗಿದ್ದು, ಹುಲಿಯ ಬೇಟೆಗೆ ಬಲೆಬೀಸಿತ್ತು. ಇಲಾಖೆಗೆ ಚಳ್ಳೆ ಹಣ್ಣು ತಿನ್ನಿಸಿ, ತಪ್ಪಿಸಿಕೊಳ್ಳುತ್ತಿದ್ದ ನರಭಕ್ಷಕ ಹುಲಿಯನ್ನು ಹಿಡಿಯಬೇಕೆಂದು ಪಟ್ಟು ಹಿಡಿದ ಅರಣ್ಯ ಇಲಾಖೆಯು ಬೇಕಾದ ವ್ಯವಸ್ಥೆಯನ್ನು ಮಾಡಿಕೊಂಡಿತ್ತು.

ನಿನ್ನ ಹೆಡಿಯಾಲ ಬಾರ್ಡರ್ ವ್ಯಾಪ್ತಿಯ ಕಲ್ಲಾರೆಕಂಡಿ ಅರಣ್ಯದಲ್ಲಿ ಅಳವಡಿಸಲಾಗಿದ್ದ ಕ್ಯಾಮರದಲ್ಲಿ ಹುಲಿಯ ಫೋಟೋ ಸೆರೆಯಾಗಿದ್ದು, ದನದ ಮಾಂಸವನ್ನು ತಿಂದು ಹೋಗಿತ್ತು. ಇಂದು ಮುಂಜಾನೆ ಅದೇ ಜಾಗಕ್ಕೆ ಭೇಟಿ ನೀಡಿದ ಹುಲಿಯನ್ನು, ಅಲ್ಲಿಯೇ ಗುಪ್ತವಾಗಿ ಕಾದು ಕುಳಿತಿದ್ದ ಪಶು ವೈದ್ಯರು ಹಾಗೂ ಅರಣ್ಯ ಸಿಬ್ಬಂದಿಗಳು ಅರವಳಿಕೆ ಮದ್ದನ್ನು ಚುಚ್ಚಿ ಹುಲಿಯನ್ನು ಸೆರೆಹಿಡಿದಿದ್ದಾರೆ. ಕಾರ್ಯಾಚರಣೆಯಲ್ಲಿ ಸೆರೆಹಿಡಿದಿರುವ ವ್ಯಾಘ್ರ ಆರೋಗ್ಯವಾಗಿದ್ದು, ಇದನ್ನು ಮೈಸೂರಿನ ಪ್ರಾಣಿ ಸಾಂತ್ವಾನ ಕೇಂದ್ರ ಕೂರ್ಗಳ್ಳಿಗೆ ವರ್ಗಾಯಿಸಿರುವುದಾಗಿ ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಹೀಗೆ ತಿಂಗಳುಗಳಿಂದ ಕಣ್ಣುಮುಚ್ಚಾಲೆ ಆಟವಾಡಿಸುತ್ತಿದ್ದ ನರಭಕ್ಷಕ ಹುಲಿಯನ್ನು ಅರಣ್ಯ ಇಲಾಖೆಯು ತನ್ನ ವಶಕ್ಕೆ ಪಡೆದುಕೊಂಡಿದ್ದು, ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.

ಇದನ್ನೂ ಓದಿ : ಮತದಾನದ ದಿನ ಮಳೆಯಾಗಲಿದೆ, ಹವಾಮಾನ ಇಲಾಖೆ ಎಚ್ಚರಿಕೆ!

Leave A Reply

Your email address will not be published.