Kukke Champa shashti: ಇಂದಿನಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಮಹೋತ್ಸವ-ವಾರ್ಷಿಕ ಜಾತ್ರೆ ಮಹೋತ್ಸವ

Dakshina Kannada news Kukke Subrahmanya Temple Kukke Champa shashti 2023 starts from today

Kukke Champa shashti : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಮಹೋತ್ಸವ ಹಾಗೂ ವಾರ್ಷಿಕ ಜಾತ್ರೆ ಮಹೋತ್ಸವ ಡಿ. 10ರಂದು ಕೊಪ್ಪರಿಗೆ ಏರುವುದರ ಮೂಲಕ ಆರಂಭಗೊಂಡು ಡಿ. 24ರ ವರೆಗೆ ನಡೆಯಲಿದೆ. ಡಿ. 10 ಮತ್ತು 11ರಂದು ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ ಜರಗಲಿದೆ.

ಷಷ್ಟಿ ಮಹೋತ್ಸವದ (Kukke Champa shashti )ಪೂರ್ವಭಾವಿಯಾಗಿ ಡಿ.9 ಶನಿವಾರ ಪೂರ್ವಾಹ್ನ 11.15ರ ಸುಮುಹೂರ್ತದಲ್ಲಿ ದೇವಸ್ಥಾನದ ಗರ್ಭಗುಡಿಯಿಂದ ಪ್ರಧಾನ ಅರ್ಚಕ ವೇ|ಮೂ| ಸೀತಾರಾಮ ಎಡಪಡಿತ್ತಾಯ ಅವರು ಮೂಲಮೃತ್ತಿಕೆಯನ್ನು ತೆಗೆದರು.

ಆರಂಭದಲ್ಲಿ ದೇಗುಲದ ಪುರೋಹಿತರಿಗೆ ಮತ್ತು ಆಡಳಿತ ಮಂಡಳಿಯವರಿಗೆ, ಬಳಿಕ ಭಕ್ತರಿಗೆ ಮೂಲಮೃತ್ತಿಕೆಯನ್ನು ವಿತರಿಸಲಾಯಿತು. ಸಹಸ್ರಾರು ಭಕ್ತರು ಬೆಳಗ್ಗೆ 10 ಗಂಟೆಯಿಂದಲೇ ಸಾಲಿನಲ್ಲಿ ನಿಂತು ಮೃತ್ತಿಕಾ ಪ್ರಸಾದ ಪಡೆದರು. ಮೂಲಮೃತ್ತಿಕಾ ಪ್ರಸಾದ ತೆಗೆಯುವ ಹಿನ್ನೆಲೆಯಲ್ಲಿ ಪೂರ್ವಾಹ್ನ ಭಕ್ತರಿಗೆ ಶ್ರೀ ದೇವರ ದರುಶನಕ್ಕೆ ಅವಕಾಶ ಇರಲಿಲ್ಲ. ಅಪರಾಹ್ನ 2 ಗಂಟೆಯ ಬಳಿಕ ಅವಕಾಶ ಕಲ್ಪಿಸಲಾಯಿತು.

ಮೂಲಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಗರ್ಭಗುಡಿಯಿಂದ ತೆಗೆಯುವ ಈ ಮೃತ್ತಿಕೆ ಅತ್ಯಂತ ಪವಿತ್ರ ಮಹಾಪ್ರಸಾದ ಎಂಬ ನಂಬಿಕೆ ಕ್ಷೇತ್ರದ ಭಕ್ತರದು.

ಒಂದು ಬಾರಿ ಮಾತ್ರ
ಮೂಲಮೃತ್ತಿಕೆಯನ್ನು ವರ್ಷದಲ್ಲಿ ಒಮ್ಮೆ ಮಾತ್ರ ತೆಗೆಯಲಾಗುತ್ತದೆ. ಈ ಪ್ರಸಾದವು ರೋಗ ನಿರೋಧಕ, ಸಂತಾನ ಕಾರಕ ಮತ್ತು ಚರ್ಮ ರೋಗಗಳ ಪರಿಹಾರಕ್ಕೆ ದಿವ್ಯ ಔಷಧ‌ವೆಂಬ ನಂಬಿಕೆಯಿದೆ.

ಮೃತ್ತಿಕಾ ಪ್ರಸಾದವನ್ನು ಶುಭ ಕಾರ್ಯಗಳ ಒಳಿತಿಗೂ ವ್ಯಾಧಿಗಳ ನಿವಾರಣೆಗೂ ಭಕ್ತರು ಕೊಂಡೊಯ್ಯುತ್ತಾರೆ. ಇದನ್ನು ತೀರ್ಥದಲ್ಲಿ ಸೇವಿಸುವ ಮೂಲಕ ಅಥವಾ ಶರೀರಕ್ಕೆ ರಕ್ಷೆಯಾಗಿ ಕಟ್ಟಿಕೊಳ್ಳುವ ಮೂಲಕ ಭಕ್ತರು ತಮ್ಮೊಳಗೆ ಧಾರಣೆ ಮಾಡುತ್ತಾರೆ. ಮೂಲಮೃತ್ತಿಕೆ ತೆಗೆಯುವ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಭಕ್ತರಿಗೆ ವಿಳಂಬವಾಗಿ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯ ನಿರ್ವಹಣಾಧಿಕಾರಿ ಡಾ| ನಿಂಗಯ್ಯ, ಎಇಒ ರಾಜಣ್ಣ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಪಿ.ಜಿ.ಎಸ್‌.ಎನ್‌. ಪ್ರಸಾದ್‌, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಶೋಭಾ ಗಿರಿಧರ್‌, ಲೋಕೇಶ್‌ ಮುಂಡುಕಜೆ, ವನಜಾ ವಿ. ಭಟ್‌, ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್‌, ಹೆಬ್ಟಾರ್‌ ಪ್ರಸನ್ನ ಭಟ್‌, ಪಾಟಾಳಿ ಲೋಕೇಶ್‌ ಎ.ಆರ್‌. ಉಪಸ್ಥಿತರಿದ್ದರು.

ಇದನ್ನೂ ಓದಿ: ಪಾಸ್‌ಪೋರ್ಟ್‌ ಪರಿಶೀಲನೆಗೆಂದು ಬಂದ ಮಹಿಳೆಯ ತಲೆಗೆ ಗುಂಡು ಹಾರಿಸಿದ ಪೊಲೀಸ್‌ ಇನ್ಸ್‌ಪೆಕ್ಟರ್‌! ವೀಡಿಯೋ ವೈರಲ್‌!

Leave A Reply

Your email address will not be published.