Raichur: ಹೋಟೆಲ್’ನಲ್ಲಿ ಆತ್ಮಹತ್ಯೆಗೆ ಶರಣಾದ ಬಾಣಂತಿ, ಜನಿಸಿದ 20 ದಿನಕ್ಕೇ ಅನಾಥವಾದ ಹಸುಗೂಸು!

death news suicide news women committed suicide in a hotel room

ಗಂಡ ಕೆಲಸ ಮಾಡುತ್ತಿದ್ದ ಹೋಟೆಲ್ ರೂಮಿನಲ್ಲಿ ಬಾಣಂತಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದ್ದು, ಕೇವಲ 20 ದಿನಗಳ ಕಂದಮ್ಮ ತನ್ನ ತಾಯಿಯನ್ನು ಕಳೆದುಕೊಂಡು ಅನಾಥವಾಗುವಂತಾಗಿದೆ. ಈ ಘಟನೆಯ ರಾಯಚೂರಿನ ಹೋಟೆಲೊಂದರಲ್ಲಿ ನಡೆದಿದ್ದು, ರಾಯಚೂರಿನ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಮಹಿಳೆಯನ್ನು ಉತ್ತರ ಪ್ರದೇಶದ ನಗಲಬಾರಿ ಜಿಲ್ಲೆಯ ಅತ್ರಾಸ್ ನಿವಾಸಿ ಸೋನಿ (23) ಎಂದು ಗುರುತಿಸಲಾಗಿದೆ. ಇವರು ರಾಯಚೂರು ಹೋಟೆಲ್ ನಲ್ಲಿ ಸ್ವೀಟ್ ತಯಾರಿಕೆಯ ಕೆಲಸ ಮಾಡುತ್ತಿದ್ದ ಅವಿನಾಶ್ ಎಂಬವರನ್ನು ಕಳೆದ ವರ್ಷ ಉತ್ತರ ಪ್ರದೇಶದಲ್ಲಿ ಮದುವೆಯಾಗಿದ್ದರು. ಆ ಬಳಿಕ ಇಬ್ಬರೂ ಅಲ್ಲಿಂದ ಅವಿನಾಶ್ ಕೆಲಸ ಮಾಡುತ್ತಿದ್ದ ರಾಯಚೂರು ನಗರದ ಸಂತೋಷ ಸರೋವರ ಹೋಟೆಲ್ ಗೆ ಬಂದು ವಾಸವಾಗಿದ್ದು, ರೂಮ್ ನಂಬರ್ 113 ರಲ್ಲಿ ನೆಲೆಸಿದ್ದರು.‌ ಹೊರ ರಾಜ್ಯದಿಂದ ಹೊಟ್ಟೆಪಾಡಿಗಾಗಿ ರಾಯಚೂರಿಗೆ ಬಂದ ದಂಪತಿಗಳು ಅನ್ಯೋನ್ಯವಾಗಿದ್ದರು.

ಮೃತ ಸೋನಿ ಕಳೆದ 20 ದಿನಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಹೆರಿಗೆ ನೋವು ಬಂದಿದ್ದ ಸಂದರ್ಭದಲ್ಲಿ ಮಗುವಿನ ತೂಕ ಹೆಚ್ಚಿದೆ ಎಂಬ ಕಾರಣಕ್ಕಾಗಿ ವೈದ್ಯರು ಆಪರೇಷನ್ ಮಾಡಿ ಮಗುವನ್ನು ಹೊರತೆಗೆದಿದ್ದರು. ಆಪರೇಷನ್ ಆಗಿ ಏಳು ದಿನಗಳ ಕಾಲ ಆಸ್ಪತ್ರೆ ಎಲ್ಲೇ ಇದ್ದ ದಂಪತಿಗಳು ನಂತರ ತಮ್ಮ ಹೋಟೆಲ್ ರೂಮ್ಗೆ ಬಂದು ನೆಲೆಸಿದ್ದರು. ಗಂಡು ಮಗು ಹುಟ್ಟಿದ ಹಿನ್ನೆಲೆ ಸಂಭ್ರಮಪಟ್ಟಿದ್ದ ಅವಿನಾಶ್ ತನ್ನ ಗೆಳೆಯರಿಗೆ ಪಾರ್ಟಿ ನೀಡಿದ್ದ.

ಇದನ್ನು ಓದಿ: Walnuts: ಚಳಿಗಾಲದಲ್ಲಿ ವಾಲ್ನಟ್ಸ್ ತಿಂದರೆ ಇಷ್ಟೆಲ್ಲಾ ಪ್ರಯೋಜನಗಳು ಇದ್ಯಾ? ಇಲ್ಲಿದೆ ನೋಡಿ ಡೀಟೇಲ್ಸ್​

ಅವಿನಾಶ್ ಮಗು ಹುಟ್ಟಿದ್ದಕ್ಕಾಗಿ ಸಂತೋಷದಿಂದ ಇದ್ದದ್ದೇನೋ ಹೌದು. ಆದರೆ ಆತ ತನ್ನ ಬಾಣಂತಿ ಹೆಂಡತಿಯ ಕಡೆಗೆ ಗಮನಹರಿಸುತ್ತಿರಲಿಲ್ಲ. ಸೋನಿ ತನ್ನ ಆಪರೇಷನ್ ನೋವು ಹೆಚ್ಚಾದಾಗ ಗಂಡನ ಗಮನಕ್ಕೆ ತರುತ್ತಿದ್ದಳು. ಇದಕ್ಕೆ ಪ್ರತಿಯಾಗಿ ಆಕೆಯ ಗಂಡ ಕಡಿಮೆಯಾಗುತ್ತದೆ ಬಿಡು ಎಂಬ ಜಿಜ್ಞಾಸಿಯ ಉತ್ತರ ಕೊಟ್ಟು ಸುಮ್ಮನಾಗುತ್ತಿದ್ದ.ಆಕೆಗೆ ದಿನೇ ದಿನೇ ಆಪರೇಷನ್ ನೋವು ಹೆಚ್ಚಾಗುತ್ತಲೇ ಇತ್ತು.

ಈ ಸಂದರ್ಭದಲ್ಲಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಪತಿ ಬಾಣಂತಿಯೊಬ್ಬಳನ್ನೇ ಬಿಟ್ಟು ಕ್ರಿಕೆಟ್ ನೋಡಲು ಹೊರಗೆ ಹೋಗಿದ್ದ. ಇತ್ತ ಮನನೊಂದ ಸೋನಿ ತನ್ನ ನೋವು ಹೆಚ್ಚಾಗಿದ್ದಕ್ಕೆ ತನ್ನ 20 ದಿನಗಳ ಮಗುವಿದ್ದ ಆ ಕೊಠಡಿಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ.

ಮಹಿಳೆಯ ಆತ್ಮಹತ್ಯೆಯ ಬಳಿಕ ಹೋಟೆಲ್ ಮಾಲೀಕರು ಪಶ್ಚಿಮ ಠಾಣೆಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ರಾಯಚೂರು ಎಸ್ಪಿ ನಿಖಿಲ್.ಬಿ ಪರಿಶೀಲನೆ ನಡೆಸಿದರು. ಸಿಸಿಟಿವಿ ಪರಿಶೀಲನೆಯ ಜೊತೆಗೆ ಬೆರಳಚ್ಚು ತಜ್ಞರು ಸಂಪೂರ್ಣ ಕೊಠಡಿಯಲ್ಲಿ ತಪಾಸನೆ ನಡೆಸಿದ್ದು, ನಂತರ ಮೃತ ದೇಹವನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು.

ಇತ್ತ ಮೃತರ ಪತಿ ಅವಿನಾಶ್ ನನ್ನು ಪಶ್ಚಿಮ ಠಾಣೆ ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಹೇಳಲಾಗುತ್ತಿರುವ ಈ ಘಟನೆಯ ಕುರಿತು ಯೂಡಿಆರ್ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯಕ್ಕೆ ಪೊಲೀಸರ ವಶದಲ್ಲಿರುವ ತಂದೆ ಹಾಗೂ ಆತ್ಮಹತ್ಯೆ ಮಾಡಿಕೊಂಡಿರುವ ತಾಯಿಯನ್ನು ಕಳೆದುಕೊಂಡು ಕೇವಲ 20 ದಿನಗಳ ಹಸುಗೂಸು ತಬ್ಬಲಿಯಾಗಿದ್ದು, ಇಂತಹ ಪರಿಸ್ಥಿತಿ ವೈರಿಗೂ ಬರಬಾರದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

Leave A Reply

Your email address will not be published.