Belagavi: ತಡರಾತ್ರಿ ಸ್ಫೋಟಗೊಂಡ ಸಿಲಿಂಡರ್, ಹಸುಗೂಸು ಸೇರಿ ಮನೆಮಂದಿಗೆಲ್ಲಾ ಗಂಭೀರ ಗಾಯ!


Belagavi: ನಿನ್ನೆ ತಡರಾತ್ರಿ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಇದರಿಂದಾಗಿ 9 ತಿಂಗಳ ಹಸುಗೂಸು ಸೇರಿ ಒಂದೇ ಕುಟಂಬದ ಏಳು ಜನರು ಗಂಭೀರ ಗಾಯಗೊಂಡಿದ್ದಾರೆ. ಈ ಘಟನೆಯು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ‌ಅಕ್ಕತಂಗೇರಹಾಳ ಗ್ರಾಮದಲ್ಲಿ ನಡಿದಿದ್ದು, ಅಪಾರ ಹಾನಿ ಸಂಭವಿಸಿದೆ.

ನಿನ್ನೆ ರಾತ್ರಿ ಅಡುಗೆ ತಯಾರಿಸಿ ಊಟ ಮಾಡಿದ ನಂತರ ಲೈಟ್ ಆಫ್ ಮಾಡಿ ಕುಟುಂಬದವರೆಲ್ಲರೂ ಮಲಗಿದ್ದರು. ಮಧ್ಯರಾತ್ರಿ ವೇಳೆ ಗ್ಯಾಸ್ ಸೋರಿಕೆ ಆಗಿರುವಂತೆ ವಾಸನೆ ಬರುತ್ತಿತ್ತು. ಹಾಗಾಗಿ ಮೊಬೈಲ್ ಟಾರ್ಚ್ ಆನ್ ಮಾಡಿ, ಇದರ ಸಹಾಯದಿಂದ ಅಡುಗೆ ಮನೆಗೆ ಹೋಗಿ, ಗ್ಯಾಸ್ ಸ್ಟೌವ್ ಬಳಿ ಹೋದಾಗ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಪೋಟಗೊಂಡ ರಭಸಕ್ಕೆ ಮನೆಯ ಹಂಚುಗಳು ಹಾರಿ ಹೋಗಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿದೆ. ಸಿಲಿಂಡರ್ ಸ್ಪೋಟದ ರಭಸಕ್ಕೆ ಹಾರಿಹೋದ ಮನೆಯ ಹಂಚುಗಳು. ಚೆಲ್ಲಾಪಿಲ್ಲಿಯಾಗಿ ಬಿದ್ದ ಮನೆಯಲ್ಲಿನ ವಸ್ತುಗಳು. ಸ್ಪೋಟದಿಂದಾಗಿ ಮನೆಯಲ್ಲಿ ಮಲಗಿದ್ದ ಕುಟುಂಬಸ್ಥರೆಲ್ಲರೂ ಬೆಚ್ಚಿಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಎಲ್ಲರಿಗೂ ಗಾಯಗಳಾಗಿವೆ.

ಗಾಯಗೊಂಡವರನ್ನು ಒಂದೇ ಕುಟುಂಬದ ಅಶೋಕ ನಿರ್ವಾಣಿ (45) ರಾಜಶ್ರೀ ನಿರ್ವಾಣಿ (42) ದೀಪಾ (42) ಸೋಮನಗೌಡ (44) ವಿದ್ಯಾ (13) ನವೀನ (14) ಹಾಗೂ 9 ತಿಂಗಳ ಮಗು ಬಸನಗೌಡ ನಿರ್ವಾಣಿ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಈರ್ವರು ಗಂಭೀರ ಗಾಯಗೊಂಡಿದ್ದು, ಇವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ‌ದಾಖಲಿಸಲಾಗಿದೆ. ಇತರ ಐದು ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.