Ayodhya: ಸೀತೆಯ ತವರಿನಿಂದ ಅಯೋಧ್ಯೆಗೆ ಬರಲಿದೆ ಭರ್ಜರಿ ಗಿಫ್ಟ್ಸ್! ನೇಪಾಳದಿಂದ ಅಯೋಧ್ಯೆಗೆ ಬರಲಿರೋ ಉಡುಗೊರೆಗಳ್ಯಾವುವು ಗೊತ್ತಾ?

 

Ayodhya: ಹೊಸ ವರ್ಷದ ಮೊದಲನೇ ತಿಂಗಳಿನಲ್ಲಿ ಅಂದರೆ ಜನವರಿಯಲ್ಲಿ ಉತ್ತರ ಪ್ರದೇಶದ ರಾಮ ಜನ್ಮಭೂಮಿಯಾಗಿರುವ ಅಯೋಧ್ಯೆಯ ಭವ್ಯ ರಾಮಮಂದಿರವು ಉದ್ಘಾಟನೆಯಾಗಲಿದೆ. ಈ ಪ್ರಯುಕ್ತ ಸೀತೆಯ ತವರೂರು ಆಗಿರುವ ನೇಪಾಳವು ಹಲವು ಬಗೆ ಬಗೆಯ ಉಡುಗೊರೆಗಳನ್ನು ಕಳುಹಿಸಿಕೊಡಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 

ನೇಪಾಳವು ಹಲವು ರೀತಿಯ ಆಭರಣ, ಬಟ್ಟೆ, ಪಾತ್ರೆಗಳು ಹಾಗೂ ಸಿಹಿ ತಿಂಡಿಗಳು ಸೇರಿದಂತೆ ವಿವಿಧ ವಿಶೇಷ ಉಡುಗೊರೆಗಳನ್ನು ಕಳುಹಿಸಲಿದೆ. ಈ ಉಡುಗೊರೆಗಳನ್ನು ರಾಮ ಮಂದಿರಕ್ಕೆ ತಲುಪಿಸಲು ಜನಕಪುರಧಾಮ- ಅಯೋಧ್ಯಾಧಾಮ ಪ್ರಯಾಣ ಕೈಗೊಳ್ಳಲಾಗುತ್ತದೆ ಎಂದು ನೇಪಾಳದ ಪತ್ರಿಕೆಯೊಂದು ವರದಿ ನೀಡಿದೆ.

 

ಈ ಪ್ರಯಾಣವು ಜನವರಿ 18ರಂದು ಪ್ರಾರಂಭಗೊಳ್ಳಲಿದ್ದು, ಜನವರಿ 20ರಂದು ಕೊನೆಗೊಳ್ಳಲಿದೆ. ಆ ದಿನವೇ ಉಡುಗೊರೆಗಳನ್ನು ಶ್ರೀ ರಾಮ ಜನ್ಮಭೂಮಿ ರಾಮಮಂದಿರ ಟ್ರಸ್ಟಿಗೆ ಹಸ್ತಾಂತರ ಮಾಡಲಾಗುವುದು ಎಂದು ಜಾನಕಿ ದೇವಸ್ಥಾನದ ಜಂಟಿ ಜಂಟಿ ಮಹಂತ ರಾಮರೋಷನ್ ದಾಸ್ ವೈಷ್ಣವ್ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಅಯೋಧ್ಯೆಯ ಮಹಾಮಸ್ತಕಾಭಿಷೇಕವು ಜನವರಿ 22ರಂದು ನಡೆಯಲಿದೆ.

 

ಈಗಾಗಲೇ ನೇಪಾಳದ ಕಾಳಿಗಂಡಕಿ ನದಿ ದಡದಿಂದ ಸಂಗ್ರಹಿಸಿದ ಶಾಲಿಗ್ರಾಮ ಕಲ್ಲುಗಳನ್ನು ಅಯೋಧ್ಯೆಗೆ ಕಳುಹಿಸಲಾಗಿದ್ದು, ಈ ಕಲ್ಲುಗಳಿಂದ ಮಾಡಿದ ಶ್ರೀರಾಮನ ಪ್ರತಿಮೆಯನ್ನು ಉದ್ಘಾಟನಾ ದಿನದಂದು ದೇವಾಲಯದಲ್ಲಿ ಸ್ಥಾಪನೆ ಮಾಡಲಾಗುವುದು. ಉಡುಗೊರೆ ಸಮರ್ಪಣಾ ಪ್ರಯಾಣವು ಜನಕಪುರಧಾಮದಿಂದ ಜಲೇಶ್ವರ ನಾಥ್, ಮಲಂಗ್ವಾ, ಸಿಮ್ರೌಂಗಧ್, ಗಧಿಮಾಯಿ, ಬಿರ್‌ಗುಂಜ್ ಮೂಲಕ ಬೇಟಿಯಾ, ಖುಶಿನಗರ, ಸಿದ್ಧಾರ್ಥನಗರ, ಗೋರಖ್‌ಪುರ ಮಾರ್ಗವಾಗಿ ಉತ್ತರ ಪ್ರದೇಶದ ಅಯೋಧ್ಯೆ ತಲುಪಲಿದೆ.

 

ಇನ್ನು ಜನವರಿ 22ರಂದು ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿರುವ ರಾಮನ ಮೂರ್ತಿಯ ಕುರಿತು ಜನವರಿ ತಿಂಗಳ ಮೊದಲ ವಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮಂದಿರ ನಿರ್ಮಾಣದ ಹೊಣೆ ಹೊತ್ತಿರುವ ‘ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌’ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಹೇಳಿದ್ದಾರೆ. ಪ್ರಸ್ತುತ 3 ವಿಗ್ರಹಗಳನ್ನು ಕೆತ್ತಲಾಗುತ್ತಿದ್ದು, ಈ ಪೈಕಿ ಗರ್ಭಗುಡಿಯಲ್ಲಿ ಕೂರಿಸಲಿರುವ ಬಾಲರಾಮ ವಿಗ್ರಹ ಯಾವುದೆಂಬ ಕುರಿತು ಉನ್ನತ ಮಟ್ಟದ ಸಮಿತಿಯು ಜನವರಿಯ ಪ್ರಥಮ ವಾರದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಚಂಪತ್‌ ರಾಯ್‌ ತಿಳಿಸಿದ್ದಾರೆ.

 

 

 

Leave A Reply

Your email address will not be published.