Crime news: ಕ್ಯಾನ್ಸರ್ ಎಂದು ಪುತ್ರನನ್ನೇ ಕೊಲೆಗೈದ ತಂದೆ! ವಿಚಾರಣೆ ಬಳಿಕ ಸಿಕ್ಕೇಬಿಡ್ತು ಹೊಸ ಟ್ವಿಸ್ಟ್!

Crime news: ಕ್ಯಾನ್ಸರ್ ಒಂದು ಹಾನಿಕಾರಕ ರೋಗವಾಗಿದ್ದು, ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಲಕ್ಷಾಂತರ ಜನರು ತನ್ನ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಆದರೆ, ಬದಲಾವಣೆ ಹೊಂದುತ್ತಿರುವ ಸಮಯಕ್ಕೆ ತಕ್ಕಂತೆ ವಿಜ್ಞಾನಿಗಳು ಕ್ಯಾನ್ಸರ್ ಗೆ ಉತ್ತಮ ಚಿಕಿತ್ಸೆಗಳನ್ನು ಕಂಡುಹಿಡಿದಿದ್ದಾರೆ. ಕ್ಯಾನ್ಸರ್ ರೋಗಿಗಳು ಹೆಚ್ಚಾಗಿ ಜೀವ ಭಯದಲ್ಲಿ ಇರುತ್ತಾರೆ.‌ ಕೆಲವರು ಈ ಮಹಾಮಾರಿಯನ್ನು ಧೈರ್ಯದಿಂದ ಎದುರಿಸಿ ನಗುನಗುತ್ತಾ ಆರಾಮಾಗಿ ಜೀವನ ನಡೆಸುತ್ತಿದ್ದಾರೆ‌. ಆದರೆ ಇನ್ನೂ ಕೆಲವರು ಕ್ಯಾನ್ಸರ್ (Cancer) ಹೆಸರು ಕೇಳಿದರೆ ಸಾಕು ಗಲಿಬಿಲಿಯಾಗುತ್ತಾರೆ, ಗಾಬರಿಯಾಗುತ್ತಾರೆ. ಕ್ಯಾನ್ಸರ್ ಪೀಡಿತರು ಖಂಡಿತವಾಗಿ ಸಾವನ್ನಪ್ಪುತ್ತಾರೆ ಎಂದೇ ಅನೇಕರು ಯೋಚಿಸುತ್ತಾರೆ. ಇನ್ನು ಇದೇ ಭಯದ ಕಾರಣದಿಂದಾಗಿ ಒಬ್ಬ ವ್ಯಕ್ತಿಯು ತನ್ನ ಸ್ವಂತ ಪುತ್ರನನ್ನೇ ಕೊಲೆಗೈದಿದ್ದಾನೆ.

ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನಗೆ ಕ್ಯಾನ್ಸರ್ ಕಾಯಿಲೆ ಇದೆ ಎಂದುಕೊಂಡು, ತನ್ನ ಸಾವಿನ ನಂತರ ಮಗನನ್ನು ನೋಡಿಕೊಳ್ಳುವವರು ಯಾರು ಇಲ್ಲ ಎಂದು ಯೋಚಿಸಿ, ಮಗನನ್ನೇ (Son) ಹತ್ಯೆಗೈದಿದ್ದಾನೆ.‌ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ಸತಾರದ ಹಿವ್ರೇ ಗ್ರಾಮದ 45 ವರ್ಷದ ವ್ಯಕ್ತಿ ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರು ಕೆಲವು ಕಾಲಗಳ ನಂತರ ತುಂಬಾನೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ತನಗೆ ಮಾರಕ ಕ್ಯಾನ್ಸರ್ ಇದೆ ಎಂದು ಯೋಚಿಸುತ್ತ ದಿನಪೂರ್ತಿ ಚಿಂತಿತರಾಗಿದ್ದರು.

ಅವರಿಗೆ 12 ವರ್ಷದ ಪುತ್ರನಿದ್ದು, ತಾನು ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಯಿಂದಾಗಿ ಸತ್ತರೆ, ಮಗನನ್ನು ನೋಡಿಕೊಳ್ಳುವವರು ಯಾರು ಇಲ್ಲ ಎಂಬ ಆತಂಕದಲ್ಲೇ ಇದ್ದರು. ಅವನ ಸಾವಿನ ನಂತರ ಮಗನ ಪರಿಸ್ಥಿತಿ ಹದಗೆಡುತ್ತದೆ ಎಂದು ಊಹಿಸಿ ಕೊರಗುತ್ತಿದ್ದನು.‌ ಇದೇ ಯೋಚನೆಯಿಂದ ದಿನ ಕಳೆಯುತ್ತಿದ್ದಂತೆ ಆ ವ್ಯಕ್ತಿಯು ದುರ್ಬಲನಾಗುತ್ತಾ ಹೋಗುತ್ತಾನೆ. ಆದರೆ ಯಾರು ಊಹಿಸದ, ಯಾವ ತಂದೆಯೂ ಮಾಡಿದಂತಹ ದುಷ್ಕೃತ್ಯವನ್ನು ಈ ವ್ಯಕ್ತಿ ಮಾಡಿಬಿಡುತ್ತಾನೆ.

ಮಹಾರಾಷ್ಟ್ರದ ಈ ವ್ಯಕ್ತಿಯು ತನ್ನ ಕ್ಯಾನ್ಸರ್ ರೋಗದಿಂದ ಮಗ ಒಂಟಿಯಾಗುತ್ತಾನೆ ಎಂಬ ಕಾರಣದಿಂದ ಮಗನನ್ನು ತನ್ನ ಕೈಯಿಂದಲೇ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಆನಂತರ ಯಾರಿಗೂ ತಿಳಿಯದಂತೆ ಮಗನ ಹೆಣವನ್ನು ತನ್ನ ಹೊಲದಲ್ಲಿ ಗುಂಡಿ ತೋಡಿ ಅಗೆದು ಹೂತು ಹಾಕಿದ್ದಾನೆ.

ಇದಾದ ಹತ್ತು ದಿನಗಳ ನಂತರ, ಅಂದರೆ ಡಿಸೆಂಬರ್ 23ರಂದು ಈ ಘಟನೆಯು ಬೆಳಕಿಗೆ ಬಂದಿದ್ದು, ಮಗ ಕಾಣದಿದ್ದ ಕಾರಣ ಅಕ್ಕಪಕ್ಕದವರಿಗೆ ಅನುಮಾನ ಮೂಡಿತ್ತು. ಕ್ಯಾನ್ಸರ್ ಎಂದು ಊಹಿಸಿದ್ದ ವ್ಯಕ್ತಿಯ ಹಾವಭಾವ ಕೂಡ ವಿಚಿತ್ರವಾಗಿದ್ದು, ಆನಂತರ ಸ್ಥಳೀಯರು ಪೊಲೀಸರಿಗೆ ಈ ಕುರಿತಾಗಿ ದೂರು ನೀಡಿದ್ದಾರೆ. ಆತನನ್ನು ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ತನ್ನ ಪುತ್ರನನ್ನು ತಾನೇ ಕೊಲೆಗೈದಿರುವುದಾಗಿ ನಿಜ ಬಾಯ್ಬಿಟ್ಟಿದ್ದಾನೆ. ನಂತರ ಪೊಲೀಸರು ಜಮೀನಿಗೆ ಧಾವಿಸಿ ಬಾಲಕನ ಶವವನ್ನು ಹೊರತೆಗೆದಿದ್ದಾರೆ.

ಆದರೆ ಇಷ್ಟೆಲ್ಲ ಆದ ನಂತರ ಈ ಕಥೆಯಲ್ಲಿ ಬೇರೆಯೇ ಟ್ವಿಸ್ಟ್ (Twist) ಸಿಕ್ಕಿದೆ. ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬ ನಾಣ್ಣುಡಿಯಂತೆ, ಇಲ್ಲಿ ತಂದೆಯು ಯೋಚಿಸಿದ್ದೇ ಒಂದು, ನಡೆದ ವಾಸ್ತವವೇ ಇನ್ನೊಂದಾಗಿತ್ತು. ಆರೋಗ್ಯ ಪರೀಕ್ಷೆ ನಡೆಸಿದ ಬಳಿಕ ತಿಳಿದ ಸತ್ಯವೇನೆಂದರೆ, ಕೊಲೆ ಮಾಡಿದ ತಂದೆಗೆ ಕ್ಯಾನ್ಸರ್ ಎಂಬ ರೋಗವೇ ಇರಲಿಲ್ಲ.

Leave A Reply

Your email address will not be published.