Vijayapura: ಬರೋಬ್ಬರಿ 25 ಅಡಿ ಎತ್ತರದ ಕಬ್ಬು ಬೆಳೆದ ಸಹೋದರರು! ಎಲ್ಲರ ಹುಬ್ಬೇರಿಸಿದೆ ರೈತರ ಈ ಟೆಕ್ನಾಲಜಿ!

Vijayapura: ಎತ್ತರದ ದೀರ್ಘಕಾಲಿಕ ಹುಲ್ಲಿನ ಪ್ರಭೇದವಾಗಿರುವ ಕಬ್ಬನ್ನು ಸಕ್ಕರೆ, ಬೆಲ್ಲ ಮುಂತಾದವುಗಳ ಉತ್ಪಾದನೆಗಾಗಿ ಬಳಸಲಾಗುತ್ತದೆ. ಈ ಕಬ್ಬು ಸಾಮಾನ್ಯವಾಗಿ 8 ರಿಂದ 10 ಆಡಿ ಎತ್ತರಕ್ಕೆ ಬೆಳೆಯುತ್ತದೆ. ಆದರೆ ಇಲ್ಲಿನ ರೈತರು ಬರೋಬ್ಬರಿ 25 ಅಡಿ ಎತ್ತರದ ಕಬ್ಬನ್ನು ಬೆಳೆದಿದ್ದಾರೆ. ವಿಜಯಪುರ ಜಿಲ್ಲೆ ನಿಡಗುಂದಿ ತಾಲ್ಲೂಕಿನ ಗೊಳಸಂಗಿ ಗ್ರಾಮದ ನಾರಾಯಣ ಸಾಳುಂಕೆ ಹಾಗೂ ಅವರ ಸಹೋದರ ಸಿದ್ದುಬಾ ಅವರು ಇಂತಹ ಸಾಧನೆಯನ್ನು ಮಾಡಿ ನೋಡುಗರನ್ನು ನಿಬ್ಬೆರಗಾಗಿಸಿದ್ದಾರೆ.

 

ಇಸ್ರೇಲಿ ತಂತ್ರಜ್ಞಾನವನ್ನು (Israeli technology) ಅಳವಡಿಸಿಕೊಂಡು ಕಬ್ಬು ಬೆಳೆ (Sugar cane) ಬೆಳೆಸಿದ ಸಹೋದರರು ಸುಮಾರು 5 ಎಕರೆ ತೋಟದಲ್ಲಿ 686 ಟನ್ ಗಳಷ್ಟು ಕಬ್ಬು ಕಟಾವು ಮಾಡಿದ್ದಾರೆ. ರೈತರ ಪ್ರಕಾರ, ಸಾಮಾನ್ಯವಾಗಿ ಕಬ್ಬಿನ ಕಾಂಡವು ಸುಮಾರು 2 ಕೆಜಿ ತೂಕ ಇರುತ್ತದೆ, ಆದರೆ ಇವರು ಬೆಳೆದ ಕಬ್ಬು ಬರೋಬ್ಬರಿ 3.5 ರಿಂದ 4 ಕೆಜಿ ತೂಕ ಇದೆ. ಸಾಮಾನ್ಯವಾಗಿ ಬೆಳೆಯುವ ಕಬ್ಬಿಗಿಂತಲೂ ಎತ್ತರದ (25 ft cane) ಕಬ್ಬನ್ನು ಸಾಳುಂಕೆ ಸಹೋದರರು ಬೆಳೆದಿದ್ದಾರೆ.

 

ಈ ಬೆಳೆಯ ಬಗ್ಗೆ ಮಾತನಾಡಿದ ನಾರಾಯಣ ಸಾಳುಂಕೆ ಹಾಗೂ ಅವರ ಸಹೋದರ ಸಿದ್ದುಬಾ ಅವರು ತಜ್ಞರು ಸೂಚಿಸಿದ ಸಲಹೆಯ ಮೇರೆಗೆ ನಾವು SNK 13374 ವಿಧದ ಕಬ್ಬು ಬೆಳೆ ಬೆಳೆಸಿದ್ದೇವೆ. ಆದಕ್ಕೆ ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಿದ್ದೇವೆ ಹಾಗೂ ಸಾವಯವ ಗೊಬ್ಬರವನ್ನು ಮಾತ್ರ ಹಾಕಲಾಗಿದೆ. ಹಾಗಾಗಿ ಹೆಚ್ಚಿನ ಇಳುವರಿ ಲಭಿಸಲು ಸಹಕಾರಿಯಾಗಿದೆ ಎಂದು ಹೇಳಿದರು.‌

 

“ಈ ಪ್ರದೇಶದಲ್ಲಿ ಅತಿ ಎತ್ತರದ ಕಬ್ಬು ಬೆಳೆಯನ್ನು ನೋಡಲು ಉತ್ತರ ಪ್ರದೇಶದಿಂದ ರೈತರಾದ ಮಹಾರಾಜಸಿಂಗ್, ಮುನೇಂದ್ರಸಿಂಗ್, ರವಿಂದರ್‌ಸಿಂಗ್, ಅಮ್ರೋಹಾ, ಮುಖೇಶಸಿಂಗ್ ಅವರು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಈ ಕಬ್ಬು ಬೆಳೆಯ ಬಗ್ಗೆ ತಿಳಿದುಕೊಂಡ ಅವರು ಇದೇ ಮಾದರಿಯನ್ನು ತಮ್ಮ ಊರಿನಲ್ಲಿಯೂ ಕೂಡ ಅಳವಡಿಸಿಕೊಳ್ಳುವುದಾಗಿ ಹೇಳಿದರು. ನಾವು ತಳಿಯನ್ನು ಬೆಳೆಸಿದ ರೀತಿ ಹಾಗೂ ಅದರ ಮಾಹಿತಿಯನ್ನು ಎಲ್ಲಿಂದ ಪಡೆಯಲಾಗಿದೆ ಎಂಬುದರ ಕುರಿತು ತಿಳಿಯ ಬಯಸಿದ್ದರು. ಉತ್ತರ ಪ್ರದೇಶದಿಂದ ಬಂದಿದ್ದ ರೈತರಿಗೆ ಅಗತ್ಯ ಮಾಹಿತಿ ಕೊಟ್ಟಿದ್ದೇನೆ’ ಎಂದು ನಾರಾಯಣ ಸಾಳುಂಕೆ ಹೇಳಿದರು.

 

ಕಬ್ಬು ಬೆಳೆಯನ್ನು ಬೆಳೆಯುವ ಮುಂಚಿತವಾಗಿ ಸಹೋದರರು ಕೃಷಿ ವಿಜ್ಞಾನಿಗಳ ಜೊತೆ ಮಾತನಾಡಿ ಅವರಿಂದ ಸೂಕ್ತ ತಳಿಯ ಬಗ್ಗೆ ಮಾರ್ಗದರ್ಶನ ಪಡೆದುಕೊಂಡು ತಮ್ಮ ಜಮೀನಿನಲ್ಲಿ ಬೆಳೆಯುತ್ತಿದ್ದರು ಎಂದು ತಿಳಿಸಿದ್ದಾರೆ. ಯಾವುದೇ ರೈತರು ಆಸಕ್ತಿ ತೋರಿಸಿ, ಕಬ್ಬು ಬೆಳೆಯಲ್ಲಿ ಹೆಚ್ಚಿನ ಇಳುವರಿ ಮತ್ತು ಉತ್ತಮ ಆದಾಯ ಪಡೆಯಲು ಬಯಸಿದ್ದಲ್ಲಿ ಅವರಿಗೆ ಬೇಕಾದ ಮಾಹಿತಿಯನ್ನು ನೀಡಲು ತಾವು ಸಿದ್ಧರಿದ್ದೇವೆ ಎಂದು ಸಹೋದರ ಹೇಳಿದ್ದಾರೆ. ಇದರ ಜೊತೆಗೆ ” ಕಡಿಮೆ ಹೂಡಿಕೆಯೊಂದಿಗೆ ಹೆಚ್ಚಿನ ಲಾಭಗಳಿಸಲು ರೈತರು ನವನವೀನ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕೆಂದು ನಾವು ಅಪೇಕ್ಷಿಸುತ್ತೇವೆ” ಎಂದು ತಿಳಿಸಿದರು.

Leave A Reply

Your email address will not be published.