Dharmasthala: ಮಂಜುನಾಥನ ದರ್ಶನಕ್ಕೆಂದು ಧರ್ಮಸ್ಥಳಕ್ಕೆ ಬಂದ ಸಿಎಂ, ಡಿಸಿಎಂ – ಮೋದಿ, ಮೋದಿ ಎಂದು ಸ್ವಾಗತಿಸಿದ ಭಕ್ತರು !!

Dharmasthala: ತಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಹಿನ್ನೆಲೆ ಹಾಗೂ ಸದ್ಯದಲ್ಲೇ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಾಡಿನ ಪವಿತ್ರ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ (Manjunath) ದರ್ಶನ ಪಡೆದರು.

ಸಿಎಂ, ಡಿಸಿಎಂ ಕ್ಷೇತ್ರಕ್ಕೆ ಬರುತ್ತಿದ್ದಂತೆ ದೇವಸ್ಥಾನದ ಆನೆಗಳು ನೃತ್ಯ ಮಾಡುತ್ತಾ ಮತ್ತು ವಾದ್ಯಘೋಷಗಳ ಮೂಲಕ ಸ್ವಾಗತವನ್ನು ನೀಡಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ದೇವಸ್ಥಾನದ ಮುಖ್ಯದ್ವಾರದ ಬಳಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ಬರಮಾಡಿಕೊಂಡರು. ಬಳಿಕ ಸಾಂಪ್ರದಾಯಿಕ ಧಿರಿಸಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೇವಾಲಯಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ದ.ಕ ಜಿಲ್ಲೆಯ ಸ್ಥಳೀಯ ಕಾಂಗ್ರೆಸ್ ನಾಯಕರು, ಕೆಲವು ಸಚಿವರು ಅವರಿಗೆ ಸಾಥ್ ನೀಡಿದರು.

ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನು ಇಬ್ಬರು ನಾಯಕರು ಭೇಟಿ ಮಾಡಿದ್ದಾರೆ. ಈ ವೇಳೆ ಡಾ.ವೀರೇಂದ್ರ ಹೆಗ್ಗಡೆ ಅವರು ಸಿಎಂ ಮತ್ತು ಡಿಸಿಎಂ ಇಬ್ಬರಿಗೂ ಬೆಳ್ಳಿ ದೀಪಗಳನ್ನು ನೀಡಿ ಗೌರವಿಸಿದ್ದಾರೆ. ಸಿಎಂ ಮತ್ತು ಡಿಸಿಎಂ ಅವರ ಧರ್ಮಸ್ಥಳ ಭೇಟಿಯ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭೇಟಿ ಬಳಿಕ ಇಬ್ಬರೂ ನಾಯಕರು ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ ಟ್ವೀಟ್:
“ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದೆ. ಈ ವರ್ಷ ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಲಿ. ಜನರ ಕಷ್ಟ – ನಷ್ಟಗಳೆಲ್ಲವೂ ದೂರಾಗಿ ಸುಖ, ಶಾಂತಿ, ಸಮೃದ್ಧಿ ಎಲ್ಲರ ಬದುಕಲ್ಲಿ ನೆಲೆಸಲಿ ಎಂದು ಪ್ರಾರ್ಥಿಸಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಡಿ ಕೆ ಶಿವಕುಮಾರ್ ಟ್ವೀಟ್:
ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಇಂದು ಮುಖ್ಯಮಂತ್ರಿಗಳೊಂದಿಗೆ ಭೇಟಿ ನೀಡಿ, ನಾಡಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು. ಹಾಗೇ ಈ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರನ್ನು ಮಾತನಾಡಿಸಿ ಆಶೀರ್ವಾದ ಪಡೆದೆವು. ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀ ಕ್ಷೇತ್ರ ಧರ್ಮಸ್ಥಳವು ಧಾರ್ಮಿಕ, ಶಿಕ್ಷಣ, ವೈದ್ಯಕೀಯ ಕ್ಷೇತ್ರಕ್ಕೆ ಹೆಸರಾಗಿದ್ದು, ಕರ್ನಾಟಕದ ಹೆಮ್ಮೆಯಾಗಿದೆ” ಎಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮೋದಿಗೆ ಜೈಕಾರ ಕೂಗಿದ ಭಕ್ತರು:
ಧರ್ಮಸ್ಥಳಕ್ಕೆ ಸಿಎಂ ಹಾಗೂ ಡಿಸಿಎಂ ಬರುತ್ತಿದ್ದಂತೆ ಸರತಿ ಸಾಲಿನಲ್ಲಿ ನಿಂತಿದ್ದ ಕೆಲ ಭಕ್ತರು ಮೋದಿ ಮೋದಿ ಅಂತ ಕೂಗಿಕೊಂಡರು. ಮೋದಿ ಕಿ ಜೈ, ಜೈ ಶ್ರೀರಾಮ್ ಅಂತ ಕೂಗಿದ್ರು. ಅಲ್ಲದೇ ಅಬ್ ಕಿ ಬಾರ್ ಮೋದಿ ಸರ್ಕಾರ್ ಅಂತ ಘೋಷಣೆ ಕೂಗಿದ್ರು.

Leave A Reply

Your email address will not be published.