NEET UG 2024: ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ- ಡಿಐಜಿಯವರ ಹೇಳಿಕೆಯಿಂದ ಕೊನೆಗೂ ಹೊರಬಿತ್ತು ಸತ್ಯ !

ನೀಟ್ ಯುಜಿ 2023 (NEET UG 2024) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕವು ಆರು ‘ಪೋಸ್ಟ್ ಡೇಟೆಡ್ ಚೆಕ್‌’ಗಳನ್ನು ವಶಪಡಿಸಿಕೊಂಡಿದೆ. ಇದು ಪ್ರಶ್ನೆ ಪತ್ರಿಕೆಗೆ ಸಂಬಂಧಿಸಿದಂತೆ ಪ್ರತಿ ಅಭ್ಯರ್ಥಿಗಳು ತಲಾ ₹ 30 ಲಕ್ಷ ರೂಪಾಯಿಗಳನ್ನು ಕ್ವೆಶ್ಚನ್ ಪೇಪರ್ ಲೀಕ್ ಮಾಫಿಯಾದವರಿಗೆ ನೀಡಿದ ಚೆಕ್‌ಗಳಾಗಿವೆ. ಈ ಮೂಲಕ ನೀಟ್ 2024 ಕ್ವೆಶ್ಚನ್ ಪೇಪರ್ ವೀಕ್ ಆಗಿರುವುದು ಬಹುತೇಕ ಖಚಿತವಾಗಿದೆ. ಆದರೆ ಅದರ ವ್ಯಾಪ್ತಿ ಎಲ್ಲಿಯ ತನಕ ಹಬ್ಬಿದೆ ಅನ್ನುವುದು ಇನ್ನೂ ತಿಳಿಯಬೇಕಾಗಿದೆ.
ನೀಟ್ ಆಕಾಂಕ್ಷಿಗಳಿಗೆ ಪರೀಕ್ಷೆಗೂ ಮುಂಚಿತವಾಗಿಯೇ ಪ್ರಶ್ನೆ ಪತ್ರಿಕೆಗಳನ್ನು ಪೂರೈಸಲು ನೀಟ್ ಮಾಫಿಯಾದವರಿಗೆ ನೀಡಲಾದ ಚೆಕ್‌ಗಳು ಇವಾಗಿವೆ ಎಂದು ತನಿಖೆ ವೇಳೆ ಗೊತ್ತಾಗಿದೆ. ಸದ್ಯಕ್ಕೆ ಸಂಬಂಧಪಟ್ಟ ಬ್ಯಾಂಕ್‌ಗಳಿಂದ ಖಾತೆದಾರರ ವಿವರಗಳನ್ನು ತನಿಖಾಧಿಕಾರಿಗಳು ಖಚಿತಪಡಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಎಂದು ಬಿಹಾರದ ಡಿಐಜಿ ಮಾನವಜಿತ್ ಸಿಂಗ್‌ ಧಿಲ್ಲೋನ್‌ ತಿಳಿಸಿದ್ದಾರೆ.
ಇಲ್ಲಿಯ ತನಕ ಒಟ್ಟು 13 ಜನರ ಬಂಧನ: 
ನೀಟ್ 2024 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 4 ಅಭ್ಯರ್ಥಿಗಳು ಮತ್ತು ಅವರ ಕುಟುಂಬದ ಸದಸ್ಯರು ಸೇರಿ ಒಟ್ಟು 13 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯದ ಮಾಹಿತಿಗಳ ಪ್ರಕಾರ ಈ ಎಲ್ಲಾ ಆರೋಪಿಗಳು ಬಿಹಾರದ ಮೂಲದವರಾಗಿದ್ದಾರೆ. ಬಿಹಾರದ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ 9 ಆಕಾಂಕ್ಷಿಗಳು ಪರೀಕ್ಷೆಗೂ ಒಂದು ದಿನ ಮುನ್ನ ಬಿಹಾರ ರಾಜ್ಯದ ರಾಜಧಾನಿ ಪಾಟ್ನಾದ ಗುಪ್ತ ಸ್ಥಳದಲ್ಲಿ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳನ್ನು ಪಡೆದಿರುವ ಶಂಕೆಯಿದೆ ಎಂದು ಈ ಮೂಲಗಳು ತಿಳಿಸಿವೆ. ಪರೀಕ್ಷೆಗೆ ಮುನ್ನ ಪ್ರಶ್ನೆ ಪತ್ರಿಕೆ ಒದಗಿಸಲು ಪೋಷಕರು ಪ್ರತಿಯೊಬ್ಬರೂ 30 ಲಕ್ಷಕ್ಕೂ ಹೆಚ್ಚು ಹಣವನ್ನು ಪಾವತಿಸಿದ್ದಾರೆ ಎಂದು ನೀಟ್ ಆಕಾಂಕ್ಷಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸುಟ್ಟ ಪ್ರಶ್ನೆ ಪತ್ರಿಕೆ ವಶಕ್ಕೆ, ಭದ್ರ ಸಾಕ್ಷಿ ಪತ್ತೆ: 
ಹಗರಣದ ಕುರಿತು ಹಣಕಾಸಿನ ವ್ಯವಹಾರದ ಪುರಾವೆಗಳು ಸಹ ಪತ್ತೆಯಾಗಿದ್ದು, ಆರು ಪೋಸ್ಟ್ ಡೇಟೆಡ್‌ ಚೆಕ್‌ಗಳನ್ನು ತನಿಖೆ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲದೆ ಗೋಪ್ಯ ಸ್ಥಳದಿಂದ ಭಾಗಶಃ ಸುಟ್ಟ ಪ್ರಶ್ನೆ ಪತ್ರಿಕೆಯ ತುಣುಕುಗಳನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ ಎಂದು ಸದರಿ ಡಿಐಜಿ ತಿಳಿಸಿದ್ದಾರೆ.
“ನಾವು ಎನ್‌ಟಿಎಯಿಂದ ಒರಿಜಿನಲ್ ಪ್ರಶ್ನೆ ಪತ್ರಿಕೆಗಳನ್ನು ಕೇಳಿದ್ದೇವೆ. ಆದರೆ ಅವರು ಇಲ್ಲಿಯವರೆಗೆ ಪ್ರತಿಕ್ರಿಯಿಸಿಲ್ಲ. ಎನ್‌ಟಿಯಿಂದ ಪ್ರಶ್ನೆ ಪತ್ರಿಕೆ ದೊರೆತ ಬಳಿಕ, ಸುಟ್ಟ ಪ್ರಶ್ನೆ ಪತ್ರಿಕೆಯ ತುಣುಕುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ” ಮೇ ತಿಂಗಳ 5 ರಂದು ನೀಟ್ ಪರೀಕ್ಷೆಗೂ ಮುನ್ನ ಸುಮಾರು 35 ಆಕಾಂಕ್ಷಿಗಳಿಗೆ ಪ್ರಶ್ನೆ ಪತ್ರಿಕೆ ಮತ್ತು ಅವುಗಳ ಉತ್ತರಗಳನ್ನು ಒದಗಿಸಲಾಗಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಆ ಮೂಲಗಳು ತಿಳಿಸಿವೆ.
ಈ ಸಂಬಂಧ ಬಿಹಾರದ ಪಟ್ನಾದ ರಾಮಕೃಷ್ಣನಗರದ ಬಾಡಿಗೆ ಮನೆಯೊಂದಕ್ಕೆ ಆಕಾಂಕ್ಷಿ ಅಭ್ಯರ್ಥಿಗಳನ್ನು ಕರೆಸಲಾಗಿತ್ತು ಮತ್ತು ಅಲ್ಲಿ ಅವರೆಲ್ಲರಿಗೂ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳನ್ನು ಒದಗಿಸಲಾಗಿದೆ. ಈಗ ಈ ಬಾಡಿಗೆ ಮನೆಯ ಶೋಧ ಕಾರ್ಯವನ್ನು ಪೊಲೀಸರು ನಡೆಸಿದ್ದು, ಅಲ್ಲಿ ಮೊಬೈಲ್ ಫೋನ್‌ಗಳು, ಪ್ರವೇಶ ಪತ್ರಗಳು ಮತ್ತು ಇತರ ಪೂರಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಮೂಲಕ ಪ್ರಶ್ನೆ ಪತ್ರಿಕೆಯ ಹಗರಣ ಇನ್ನು ಆಳಕ್ಕೆ ಎಳೆದುಕೊಳ್ಳುತ್ತಿದೆ.
Leave A Reply

Your email address will not be published.