NEET-UG 2024: ತಪ್ಪಿದ್ದರೆ ಒಪ್ಪಿಕೊಳ್ಳಿ- ಕೇಂದ್ರಕ್ಕೆ ಮತ್ತು NTA ಗೆ ಸುಪ್ರೀಂ ಛಾಟಿ; NEET ಬರೆದ ಮಕ್ಕಳ ಶ್ರಮದ ಬಗ್ಗೆ ಪ್ರಸ್ತಾಪಿಸಿದ ಕೋರ್ಟು !

NEET UG 2024 ರಲ್ಲಿ ಆಪಾದಿತ ಪೇಪರ್ ಸೋರಿಕೆ ಮತ್ತು ಅವ್ಯವಹಾರಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತು ಕೇಂದ್ರದ ಮೇಲೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಒಂದು ಸಣ್ಣ ಬೇಜವಾಬ್ದಾರಿ ಇದ್ದರೂ ಅದರ ಬಗ್ಗೆ ತೀಕ್ಷ್ಣ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟು ಸೂಚಿಸಿದೆ.

“ಯಾರಾದರೂ ಕಡೆಯಿಂದ 0.001% ನಿರ್ಲಕ್ಷ್ಯವಿದ್ದರೆ ಕೂಡಾ ಅದನ್ನು ಸಂಪೂರ್ಣವಾಗಿ ಗಂಭೀರವಾಗಿನ ಪರಿಗಣಿಸಬೇಕು” ಎಂದು ಸುಪ್ರೀಂ ಕೋರ್ಟ್ ನ ಪೀಠ ಹೇಳಿದೆ. ನೀಟ್ ಪರೀಕ್ಷೆಗೆ ತಯಾರಾದ ಮಕ್ಕಳ ಶ್ರಮವನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.
” ಈ ರೀತಿ ಉತ್ತೀರ್ಣರಾದ ವೈದ್ಯರೊಬ್ಬರು ಜನರಿಗೆ ಚಿಕಿತ್ಸೆ ನೀಡುತ್ತಾರೆ ಅಂದ್ರೆ ಯೋಚಿಸಿಕೊಳ್ಳಿ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. NEET-UG ವಿರುದ್ಧ ಸಲ್ಲಿಸಲಾದ ಅರ್ಜಿಗಳನ್ನು ಪ್ರತಿಕೂಲ ವ್ಯಾಜ್ಯವೆಂದು ಪರಿಗಣಿಸದಂತೆ ಕೇಂದ್ರ ಮತ್ತು NTA ಗೆ ಹೇಳಿದೆ. ಪರೀಕ್ಷೆ ನಡೆಸುವಲ್ಲಿ ಕೆಲವು ತಪ್ಪುಗಳಿದ್ದರೆ ಒಪ್ಪಿಕೊಳ್ಳಲು ಮತ್ತು ಸರಿಪಡಿಸಲು ಎರಡೂ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಉನ್ನತ ನ್ಯಾಯಾಲಯವು ಎನ್‌ಟಿಎಗೆ ಮತ್ತಷ್ಟು ತಿಳಿ ಹೇಳಿದೆ: “ಪರೀಕ್ಷೆಯನ್ನು ನಡೆಸುವ ಏಜೆನ್ಸಿಯಾಗಿ ನೀವು ನ್ಯಾಯಯುತವಾಗಿ ವರ್ತಿಸಬೇಕು. ತಪ್ಪಿದ್ದರೆ, ಹೌದು, ಇದು ತಪ್ಪು ಎಂದು ಹೇಳಿ. ಜತೆಗೆ ಈ ತಪ್ಪಿಗೆ ಇದು ನಾವು ತೆಗೆದುಕೊಳ್ಳಲಿರುವ ಕ್ರಮ ಎಂದಾದರೂ ಹೇಳಿ. ಕನಿಷ್ಠ ಅದು ನಿಮ್ಮ ಕಾರ್ಯಕ್ಷಮತೆಯಲ್ಲಿ ವಿಶ್ವಾಸವನ್ನು ಉಂಟುಮಾಡುತ್ತದೆ.” ಎಂದಿದೆ ಸುಪ್ರೀಂ ಕೋರ್ಟು.

ನೀಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಎಎಪಿ ನಾಯಕ ಸೌರಭ್ ಭಾರದ್ವಾಜ್, ಸರ್ಕಾರ ಕ್ರಮ ಕೈಗೊಂಡು ತನಿಖೆ ನಡೆಸಬೇಕು ಎಂದಿದ್ದಾರೆ.
“ಇದು ಬರೋಬ್ಬರಿ 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ವಿಷಯವಾಗಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ತನಿಖೆ ನಡೆಸಬೇಕು. ಸಂಸತ್ ಸದಸ್ಯರು ಈ ವಿಷಯವನ್ನು ಚರ್ಚಿಸಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಎಎಪಿ ನಾಯಕ ಭಾರದ್ವಾಜ್ ಹೇಳಿದ್ದಾರೆ.
ಪೇಪರ್ ಸೋರಿಕೆ, ಗ್ರೇಸ್ ಮಾರ್ಕ್ ನೀಡುವುದು ಮತ್ತು ಹೆಚ್ಚು ಅಂಕ ಗಳಿಸಿದವರ ಸಂಖ್ಯೆ ಗಣನೀಯವಾಗಿ ಏರಿಕೆ ಸೇರಿದಂತೆ ಹಲವು ಆರೋಪಗಳನ್ನು ಎತ್ತಿ ಹಿಡಿದಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.

ಜೂನ್ 14 ರಂದು, ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ಮನವಿ ಸಲ್ಲಿಸಿದ ಮೇಲೆ ಕೇಂದ್ರ ಮತ್ತು ಎನ್ಟಿಎಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿತು. ಗ್ರೇಸ್ ಅಂಕಗಳನ್ನು ಪಡೆದ 1,563 NEET 2024 ಅಭ್ಯರ್ಥಿಗಳ ಅಂಕಪಟ್ಟಿಗಳನ್ನು ರದ್ದುಗೊಳಿಸುವ ನಿರ್ಧಾರದ ಬಗ್ಗೆ ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದ ನಂತರ ಈ ಸೂಚನೆ ಬಂದಿದೆ.
ಸಂತ್ರಸ್ತ ವಿದ್ಯಾರ್ಥಿಗಳಿಗೆ ಅವರ ಪರಿಷ್ಕೃತ ಅಂಕಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ, ಇದು ಹಿಂದೆ ನೀಡಲಾದ ಗ್ರೇಸ್ ಅಂಕಗಳನ್ನು ಹೊರತುಪಡಿಸುತ್ತದೆ. ಜುಲೈ 8 ರಂದು ಮುಂದಿನ ವಿಚಾರಣೆ ನಡೆಯಲಿದೆ.

Leave A Reply

Your email address will not be published.