NEET: ನೀಟ್‌ನಿಂದ ಕರ್ನಾಟಕ ರಾಜ್ಯ ಹೊರಕ್ಕೆ: ಡಿಕೆ ಶಿವಕುಮಾರ್ ಕೊಟ್ಟರು ದೊಡ್ಡ ಸುಳಿವು

NEET: “ನೀಟ್‌ ವಿಚಾರದಲ್ಲಿ ನೆರೆಯ ತಮಿಳುನಾಡು ಮಾದರಿಯನ್ನು ಅನುಸರಿಸುವ ಬಗ್ಗೆ ಗಂಭೀರ ಚಿಂತನೆ ಇದೆ’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. NEET ಪರೀಕ್ಷೆಯಿಂದ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳ ವಿದ್ಯಾರ್ಥಿಗಳಿಗೆ ಮೋಸ ಆಗುತ್ತಿದೆ ಅನ್ನುವ ವಿಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ನೀಟ್ ನಿಂದ ಹೊರಬರುವ ಸುಳಿವು ನೀಡಿದ್ದಾರೆ ಡಿಕೆಶಿ.

ನಿನ್ನೆ ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, “ಈ ಹಿಂದೆ ಹೇಳಿದಂತೆ ನಮ್ಮವರೇ ಕಾಲೇಜು ಗಳನ್ನು ನಿರ್ಮಿಸಿದ್ದಾರೆ. ಆದರೆ ಅವರ ಮಕ್ಕಳು, ಅವರ ಸಮುದಾಯದ ಮಕ್ಕಳಿಗೇ ಸೀಟು ಕೊಡಲು ಸಾಧ್ಯ ವಾಗುತ್ತಿಲ್ಲ” ಎಂದಿದ್ದಾರೆ.

“ಈ ಮಧ್ಯೆ ನೀಟ್‌ ಪರೀಕ್ಷೆಯಲ್ಲಿ ಅಕ್ರಮದಿಂದ ಮತ್ತಷ್ಟು ಅನ್ಯಾಯ ಆಗಿದೆ. ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡು ತಮಿಳುನಾಡು ಮಾದರಿಯನ್ನು ಅನುಸರಿಸುವ ಬಗ್ಗೆ ಚರ್ಚೆ ನಡೆದಿದೆ. ಸರಕಾರದ ಭಾಗವಾಗಿ ನಾನು ಈ ರೀತಿ ಹೇಳುತ್ತಿಲ್ಲ. ನಮ್ಮ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಗಮನದಲ್ಲಿ ಇರಿಸಿಕೊಂಡು ಈ ಬಗ್ಗೆ ಬಹಳ ದೊಡ್ಡ ಚರ್ಚೆ ನಡೆಯಬೇಕಿದೆ. ಮೀಸಲಾತಿ ಇರಬೇಕು. ಅದರ ಬಗ್ಗೆ ನಮ್ಮ ತಕರಾರಿಲ್ಲ. ಹಾಗೂ ಅದು ಬೇರೆಯೇ ವಿಷಯ” ಎಂದು ಅವರು ಹೇಳಿದ್ದಾರೆ.

ತಮಿಳುನಾಡು ಮಾದರಿಯಲ್ಲಿ ಏನಿದೆ ?
ಕೇಂದ್ರೀಕೃತ ನೀಟ್‌ ಪರೀಕ್ಷೆಯಿಂದ ತಮಿಳು ಭಾಷಿಕ ವಿದ್ಯಾರ್ಥಿಗಳಿಗೆ, ಬಡ ಮಕ್ಕಳಿಗೆ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಸಿಗುವ ಪ್ರಮಾಣ ಕಡಿಮೆಯಾಗಿದೆ ಎಂಬುದು ತಮಿಳುನಾಡು ಸರಕಾರದ ಆರೋಪ. ಹೀಗಾಗಿ ತಮಿಳುನಾಡಿನಲ್ಲಿ ವಿದ್ಯಾರ್ಥಿಗಳಿಗೆ ದ್ವಿತೀಯ ಪರೀಕ್ಷೆಯ ಅಂಕಗಳ ಆಧಾರದಲ್ಲಿ ವೈದ್ಯಕೀಯ ಪದವಿ ಕಾಲೇಜುಗಳಿಗೆ ಪ್ರವೇಶ ನೀಡಲು ಶಾಸನಾತ್ಮಕವಾಗಿ ನಿರ್ಧರಿಸಲಾಗಿದೆ. ಕೇಂದ್ರಕ್ಕೆ ಬಹು ದೊಡ್ಡ ಟಾಂಗ್ ನೀಡಿದೆ ಅಲ್ಲಿನ ಡಿಎಂಕೆ ಆಡಳಿತದ ರಾಜ್ಯ ಸರ್ಕಾರ.

Leave A Reply

Your email address will not be published.