ನಾಡಪ್ರಭು ಕೆಂಪೇಗೌಡ ಸೆರೆಯಾಗಿದ್ದ ಬಂಧಿಖಾನೆ ಪತ್ತೆ! ಎಲ್ಲಿದೆ ಗೊತ್ತೆ?

ಕೆಂಪೇಗೌಡ ಸೆರೆಯಾಗಿದ್ದ ಬಂಧಿಖಾನೆ ಪತ್ತೆ! ಎಲ್ಲಿದೆ ಗೊತ್ತೆ?

ಯಲಹಂಕ ನಾಡಿನ ಪಾಳೇಗಾರ, ಆಧುನಿಕ ಬೆಂಗಳೂರಿನ ಸಂಸ್ಥಾಪಕ ನಾಡಪ್ರಭು ಕೆಂಪೇಗೌಡರು ಬಂಧನದಲ್ಲಿದ್ದ ಆನೆಗೊಂದಿಯ ಸೆರೆಮನೆ ಪತ್ತೆಯಾಗಿದೆ. ಗಂಗಾವತಿಯ ಪ್ರಾಚ್ಯ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಅವರು ಹಲವಾರು ವರ್ಷಗಳಿಂದ ನಡೆಸಿದ ನಿರಂತರ ಶೋಧನೆಯಲ್ಲಿ ಅಂತಿಮವಾಗಿ ಆನೆಗೊಂದಿಯ ಜಿಂಜರ ಬೆಟ್ಟದಲ್ಲಿ ಸೆರೆಮನೆಯನ್ನು ಪತ್ತೆ ಹಚ್ಚಿದ್ದಾರೆ .

ವಿಜಯನಗರ ಸಾಮ್ರಾಜ್ಯದ ನಿಷ್ಠಾವಂತ ಮಾಂಡಲಿಕರಾಗಿದ್ದ ಯಲಹಂಕ ನಾಡಪ್ರಭು ಕೆಂಪೇಗೌಡರು ಅಳಿಯ ರಾಮರಾಯನ ಕಾಲದಲ್ಲಿ ತನ್ನ ರಾಜ್ಯದಲ್ಲಿ ಉಂಟಾದ ಆರ್ಥಿಕ ದುಸ್ಥಿತಿಯನ್ನು ಸುಧಾರಿಸಲು ಮತ್ತು ಪ್ರಜೆಗಳ ಹಿತರಕ್ಷಣೆಗಾಗಿ ಸಾಮ್ರಾಟನ ಅನುಮತಿ ಪಡೆಯದೆ ಬೈರೇಶ್ವರ ಹೆಸರಿನ ಸ್ವಂತ ನಾಣ್ಯಗಳನ್ನು ಚಲಾಯಿಸಿದ್ದರು. ಇದರಿಂದ ಕೆರಳಿದ ಅಳಿಯ ರಾಮರಾಯ ಕೆಂಪೇಗೌಡರನ್ನು ರಾಜಧಾನಿ ವಿಜಯನಗರದಲ್ಲಿ ಜರುಗುತ್ತಿದ್ದ ದಸರಾ ಉತ್ಸವಕ್ಕೆ ಆಹ್ವಾನಿಸಿ, ಬಂಧಿಸಿ ಆನೆಗೊಂದಿ ಸೆರೆಮನೆಗೆ ತಳ್ಳುತ್ತಾನೆ. ಕೆಂಪೇಗೌಡರು ಪ್ರಸಕ್ತ ಶಕೆ 1560 ರಿಂದ 5 ವರ್ಷಗಳ ಕಾಲ ಆನೆಗೊಂದಿ ಸೆರೆಮನೆಯಲ್ಲಿ ಬಂಧನದಲ್ಲಿದ್ದರು. ಪ್ರಸಕ್ತ ಶಕೆ 1565ರಲ್ಲಿ ಭಾರಿ ದಂಡ ತೆತ್ತು ಬಿಡುಗಡೆಗೊಳಿಸಲಾಗಿತ್ತು.

ಈ ಸಂಗತಿಯನ್ನು ಮೈಸೂರ್ ಗ್ಯಾಜೆಟಿಯರ್ ನಲ್ಲಿ ಉಲ್ಲೇಖಿಸಿದ್ದಾರೆ (1997). ಕೆಂಪೇಗೌಡರು ಬಂಧನದಲ್ಲಿದ್ದ ಸೆರೆಮನೆ ಹುಡುಕಾಟ ನಡೆಸಿದ ಡಾ. ಕೋಲ್ಕಾರ್ ಸಾಂದರ್ಭಿಕ ಸನ್ನಿವೇಶಗಳನ್ನು ಅನುಲಕ್ಷಿಸಿ ಆನೆಗೊಂದಿಯ ಒಂಟಿ ಸಾಲು ಆನೆ ಸಾಲು ಎಂಬ ಕಟ್ಟಡವೇ ಆನೆಗೊಂದಿ ಸೆರೆಮನೆ ಇರಬೇಕೆಂದು ಅಂದಾಜಿಸಿದ್ದರು. ಆದರೆ ಆನೆಗೊಂದಿಯಲ್ಲಿ ಪ್ರಚಲಿತವಾಗಿರುವ ಮೌಖಿಕ ಹೇಳಿಕೆಗಳು ಕೆಂಪೇಗೌಡರು ಜಿಂಜರ ಬೆಟ್ಟದಲ್ಲಿ ಬಂಧನದಲ್ಲಿದ್ದರು ಎಂಬುದನ್ನು ಸೂಚಿಸುತ್ತಿದ್ದವು.

ಕಟ್ಟಡದ ಅವಶೇಷಗಳು ಅದುವೇ ಸೆರೆಮನೆ ಎಂಬುದನ್ನು ಬಿಂಬಿಸುತ್ತವೆ ಹಾಗಾಗಿ ಮೌಖಿಕ ಪರಂಪರೆ ಮತ್ತು ಕಟ್ಟಡಗಳ ಸಾಂದರ್ಭಿಕ ಸನ್ನಿವೇಶವನ್ನು ಅನುಲಕ್ಷಿಸಿ, ಆನೆಗೊಂದಿಯ ಜಿಂಜರಬೆಟ್ಟದ ಈ ಕಟ್ಟಡಗಳೇ ಕೆಂಪೇಗೌಡರು ಬಂಧನದಲ್ಲಿದ್ದ ವಿಜಯನಗರ ಕಾಲದ ಸೆರೆಮನೆ ಎಂದು ನಿರ್ಧರಿಸಲಾಗಿದೆ ಎಂದು ಡಾ. ಶರಣಬಸಪ್ಪ ಕೋಲ್ಕಾರ್ ತಿಳಿಸಿದ್ದಾರೆ.

 

Leave A Reply

Your email address will not be published.