ಮಲಯಾಳಂ ನಟ ಫಹಾದ್ ಫಾಸಿಲ್ ಮೇಲೆ ದೂರು ದಾಖಲು! ಏನಿದು ಪ್ರಕರಣ ?

ಮಲಯಾಳಂ ನಟ ಫಹಾದ್ ಫಾಸಿಲ್ ಮೇಲೆ ದೂರು ದಾಖಲು! ಏನಿದು ಪ್ರಕರಣ ?

ಮಲಯಾಳಂ ನಟ ಫಹಾದ್ ಫಾಸಿಲ್, ಭಾರತೀಯ ಚಿತ್ರರಂಗದ ಪ್ರಸ್ತುತ ನಟರಲ್ಲಿ ಅತ್ಯುತ್ತಮ ನಟ ಎಂದು ಗುರುತಿಸಿಕೊಂಡಿದ್ದಾರೆ. ಇದೀಗ ಫಹಾದ್ ಫಾಸಿಲ್​ ವಿರುದ್ಧ ಮಾನವ ಹಕ್ಕು ಆಯೋಗವು ದೂರು ದಾಖಲಿಸಿಕೊಂಡಿದೆ. ನೋಟೀಸ್ ನೀಡಿ ವಿಚಾರಣೆಗೆ ಕರೆಯಲಿದೆ.

ಇತ್ತೀಚೆಗೆ ತೆರೆಕಂಡ ಫಹಾದ್​ರ ‘ಅವೇಶಂ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಆದರೆ ಇದೀಗ ಕೇರಳದಲ್ಲಿ ಫಹಾದ್ ಮೇಲೆ ಪ್ರಕರಣವೊಂದು ದಾಖಲಾಗಿದೆ. ಫಹಾದ್ ಫಾಸಿಲ್ ಪ್ರಸ್ತುತ ‘ಪೇಯಿನ್ ಕಿಲ್ಲಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾಕ್ಕೆ ಅವರೇ ಬಂಡವಾಳ ಸಹ ಹೂಡಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೆ ಕೇರಳದ ಎರ್ನಾಕುಲಂನ ಅಂಗಮಲೈ ಸರ್ಕಾರಿ ಆಸ್ಪತ್ರೆಯಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಆದರೆ ಈ ವೇಳೆ ಕೆಲ ನಿಯಮಗಳ ಉಲ್ಲಂಘನೆ ಆಗಿದೆ ಎಂದು ವರದಿಗಳು ಪ್ರಕಟವಾಗಿದ್ದವು, ವರದಿಗಳನ್ನು ಆಧರಿಸಿ ಕೇರಳದ ಮಾನವ ಹಕ್ಕು ಆಯೋಗವು ಫಹಾದ್ ಫಾಸಿಲ್ ಹಾಗೂ ಚಿತ್ರತಂಡದ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.

ಅಂಗಮಲೈ ತಾಲ್ಲೂಕು ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗದಲ್ಲಿ ಸಿನಿಮಾದ ಚಿತ್ರೀಕರಣವನ್ನು ಮಾಡಲಾಗಿತ್ತು, ಚಿತ್ರೀಕರಣದಲ್ಲಿ ನಟ ಫಹಾದ್ ಫಾಸಿಲ್ ಸಹ ಭಾಗಿಯಾಗಿದ್ದರು. ಸುಮಾರು 50 ಮಂದಿ ಚಿತ್ರತಂಡದವರಿದ್ದರೆ ಫಹಾದ್ ಅಲ್ಲಿ ಕಾಣಲು ದೊಡ್ಡ ಸಂಖ್ಯೆಯ ಜನ ಸೇರಿದ್ದರು ಎನ್ನಲಾಗುತ್ತಿದೆ. ಇದರಿಂದಾಗಿ ಎಮರ್ಜೆನ್ಸಿ ಘಟಕದಲ್ಲಿರುವ ರೋಗಿಗಳಿಗೆ ಸಮಸ್ಯೆ ಆಗಿದೆ ಎಂದು ವರದಿಗಳು ಪ್ರಕಟವಾಗಿದ್ದವು. ಅದರ ಆಧಾರದಲ್ಲಿ ಈಗ ದೂರು ದಾಖಲಾಗಿದೆ.

ಆದರೆ ಚಿತ್ರತಂಡವು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ರೋಗಿಗಳಿಗೆ ತೊಂದರೆ ಆಗದ ರೀತಿಯಲ್ಲಿ ನಾವು ಚಿತ್ರೀಕರಣ ಮಾಡಿದ್ದೇವೆ ಎಂದಿದೆ. ಚಿತ್ರೀಕರಣದ ಸಮಯದಲ್ಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಲೇ ಇದ್ದರು, ರೋಗಿಗಳ ಚಿಕಿತ್ಸೆಗೆ ಯಾವುದೇ ಸಮಸ್ಯೆ ಆಗಿರಲಿಲ್ಲ ಎಂದು ಸಹ ಚಿತ್ರತಂಡ ಸ್ಪಷ್ಟನೆ ನೀಡಿದೆ.

ಆದರೆ ಮಾನವ ಹಕ್ಕು ಆಯೋಗವು ದೂರು ದಾಖಲಿಸಿಕೊಂಡಿದ್ದು, ನಿರ್ಮಾಪಕ, ನಟ ಫಹಾದ್ ಫಾಸಿಲ್ ಹಾಗೂ ಚಿತ್ರತಂಡದ ಇತರೆ ಕೆಲವು ಪ್ರಮುಖ ವ್ಯಕ್ತಿಗಳಿಗೆ ನೊಟೀಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. ಕೇರಳ ಆರೋಗ್ಯ ಮಂತ್ರಿಗಳು ಸಹ ಈ ಬಗ್ಗೆ ಮಾತನಾಡಿದ್ದು, ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ವರದಿ ಕೇಳಿದ್ದಾರೆ.

Leave A Reply

Your email address will not be published.